×
Ad

ಕುಟುಂಬ ನಿರ್ವಹಣೆಗೆ ಕಿಡ್ನಿ ಮಾರುವವರ ಗ್ರಾಮ ಪತ್ತೆ!

Update: 2016-03-19 23:52 IST

ಅಹ್ಮದಾಬಾದ್, ಮಾ.19: ಗುಜರಾತ್ ಅಭಿವೃದ್ಧಿ ಮಾದರಿಯ ಬಗ್ಗೆ ನಾವೆಲ್ಲಾ ಬಹಳಷ್ಟು ಕೇಳಿದ್ದೇವೆ. ಆದರೆ ಅಭಿವೃದ್ಧಿ ಹೊಂದಿದೆಯೆಂದು ಹೇಳಲಾಗುತ್ತಿರುವ ಈ ರಾಜ್ಯದಲ್ಲಿ ಕಿತ್ತು ತಿನ್ನುವ ಬಡತನದಿಂದ ದಾರಿ ಕಾಣದೆ ಜೀವನ ನಿರ್ವಹಣೆಗಾಗಿ ತಮ್ಮ ಕಿಡ್ನಿಗಳನ್ನೇ ಮಾರುವ ಜನರ ಗ್ರಾಮವೂ ಒಂದಿದೆಯೆಂದು ಅಹ್ಮದಾಬಾದ್ ಮಿರರ್‌ನ ವರದಿಯೊಂದು ಹೇಳಿದೆ.

ಆನಂದ್ ಜಿಲ್ಲೆಯಲ್ಲಿರುವ ಪಂಡೋಲಿ ಎಂಬ ಹಳ್ಳಿಯಲ್ಲಿ ಸುಮಾರು 13 ಮಂದಿ ದೂರದ ದಿಲ್ಲಿ ಹಾಗೂ ಶ್ರೀಲಂಕಾದ ಆಸ್ಪತ್ರೆಗಳಲ್ಲಿ ತಮ್ಮ ಕಿಡ್ನಿಗಳನ್ನು ಮಾರಿ ತಮ್ಮ ಜೀವನದ ಆವಶ್ಯಕತೆಗಳನ್ನು ಪೂರೈಸಿಕೊಂಡಿದ್ದಾರೆಂದು ಮಿರರ್ ವರದಿ ಹೇಳಿದೆ. ಹೀಗೆ ಇನ್ನೂ ಹಲವಾರು ಮಂದಿ ತಮ್ಮ ಕಿಡ್ನಿಗಳನ್ನು ದಾನ ಮಾಡಿರಬಹುದೆಂದು ವರದಿಯಲ್ಲಿ ಸಂಶಯ ವ್ಯಕ್ತಪಡಿಸಲಾಗಿದೆ.
ಪಂಡೋಲಿಯಲ್ಲಿ ಸುಮಾರು 15,204 ಮಂದಿ ವಾಸಿಸುತ್ತಿದ್ದು ಅವರಲ್ಲಿ ಸುಮಾರು 4,000 ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ. ಅವರಲ್ಲಿ ಹೆಚ್ಚಿನವರು ಸಾಲದ ಶೂಲೆಯಿಂದ ಕಂಗಾಲಾಗಿರುವ ರೈತರಾಗಿದ್ದು, ಕಳೆದ 15 ವರ್ಷಗಳಿಂದ ಈ ಕಿಡ್ನಿ ಮಾರಾಟ ಜಾಲ ಇಲ್ಲಿ ಸಕ್ರಿಯವಾಗಿದೆಯೆಂದು ಹೇಳಲಾಗಿದ್ದು, ಇಲ್ಲಿಯ ತನಕ ಸುಮಾರು 80 ಹಳ್ಳಿಗರು ತಮ್ಮ ಕಿಡ್ನಿಗಳನ್ನು ಮಾರಾಟ ಮಾಡಿರಬಹುದೆಂದು ಶಂಕಿಸಲಾಗಿದೆ.
ಇತ್ತೀಚೆಗೆ ಪೊಲೀಸರು ಇಬ್ಬರು ಸ್ಥಳೀಯ ಏಜೆಂಟರುಗಳೂ, ಸಹೋದರರೂ ಆದ ರಫೀಕ್ ವೋರಾ ಹಾಗೂ ರಿಯಾಝ್ ವೋರಾರನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಿದಾಗ ಎಲ್ಲ ವಿಚಾರವೂ ಹೊರ ಬಂದಿತ್ತು. ಎಲ್ಲಾ 13 ಮಂದಿಯನ್ನೂ ನಾಡಿಯಾಡ್‌ನ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗಿ ಅವರೆಲ್ಲರ ಒಂದೊಂದು ಕಿಡ್ನಿ ತೆಗೆಯಲಾಗಿದೆಯೆಂದು ತಿಳಿದು ಬಂದಿತ್ತು.
 ಈ ಕುಟುಂಬಗಳನ್ನು ಮಿರರ್ ಪ್ರತಿನಿಧಿ ಅಹ್ಮದಾಬಾದ್‌ನ ಆಸ್ಪತ್ರೆಯೊಂದರಲ್ಲಿ ಭೇಟಿಯಾದಾಗ ಅವರೆಲ್ಲ ತಾವು ಸಾಲ ತೀರಿಸಲು, ಔಷಧ ಖರೀದಿಸಲು, ಪುತ್ರಿಯರ ವಿವಾಹ ಮಾಡಲು ಹಾಗೂ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಕಿಡ್ನಿ ‘ದಾನ’ ಮಾಡಿರುವುದಾಗಿ ಹೇಳಿದರು.
 ಹೆಚ್ಚಿನವರು ಯಾರಿಗೂ ಕೇಳದೆ ಮನೆಯಿಂದ ಹೊರ ಹೋಗಿ ತಮ್ಮ ಕಿಡ್ನಿಗಳನ್ನು ಮಾರಿ ಕೆಲವು ದಿನಗಳ ನಂತರ ಮನೆಗೆ ಏನೂ ತಿಳಿಯದವರಂತೆ ಹಿಂದಿರುಗುತ್ತಿದ್ದರು. ಈ ಕಿಡ್ನಿ ಹಗರಣ ಮೊದಲು ಬೆಳಕಿಗೆ ಬರಲು ಮಾಜಿ ಸರಪಂಚ ಹಾಗೂ ತಾಲೂಕು ಪಂಚಾಯತ್ ಸದಸ್ಯ ಜಗದೀಶ್ ಸೋಳಂಕಿ ಕಾರಣವೆಂದು ತಿಳಿದು ಬಂದಿದೆ.
 ಈ ಕಿಡ್ನಿ ಜಾಲದ ತನಿಖೆ ನಡೆಸಲು ಏಳು ಮಂದಿ ವೈದ್ಯರ ತಂಡವೊಂದನ್ನು ರಚಿಸಲಾಗಿದೆಯೆಂದು ಬಿ ಜೆ ಆಸ್ಪತ್ರೆಯ ಡೀನ್ ಭರತ್ ಜೆ ಶಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News