ಶೀಘ್ರ ಸಣ್ಣ ಅಂಗಡಿಗಳ ಮುಚ್ಚುಗಡೆ
ದಮಾಮ್, ಮಾ. 20: ಸಣ್ಣ ದಿನಸಿ ಅಂಗಡಿಗಳನ್ನು (ಬಗಲಾ) ಬಂದ್ ಮಾಡಿ ಹೆಚ್ಚು-ಹೆಚ್ಚು ಸೌದಿ ಪುರುಷರು ಹಾಗೂ ಮಹಿಳೆಯರಿಗೆ ಉದ್ಯೋಗ ನೀಡುವ ದೊಡ್ಡ ಅಂಗಡಿಗಳಿಗೆ ಮಾತ್ರ ಅನುಮತಿ ನೀಡುವಂತೆ ಕಾರ್ಮಿಕ, ಮುನಿಸಿಪಲ್ ಹಾಗೂ ಗ್ರಾಮೀಣ ಸಚಿವಾಯಕ್ಕೆ ಶಿಫಾರಸು ಮಾಡುವುದಾಗಿ ಇಲ್ಲಿನ ಶೂರಾ ಕೌನ್ಸಿಲ್ ಸದಸ್ಯ ಮುಹಮ್ಮದ್ ಅಲ್ ಖಿನಿಝೀ ಅವರು ತಿಳಿಸಿದ್ದಾರೆ.
ಪ್ರತೀ ಬೀದಿ ಬದಿಯಲ್ಲಿ ಒಂದು ಸಣ್ಣ ದಿನಸಿ ಅಂಗಡಿ ಇರುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಸಣ್ಣ ಅಂಗಡಿಗಳು ವಲಸಿಗರಿಗೆ ಉದ್ಯೋಗ ನೀಡುತ್ತದೆ. ಈಗಾಗಲೇ ಇಂತಹ ವಲಸಿಗರ ಸಂಖ್ಯೆ 10 ಲಕ್ಷ ಇದೆ. ಆದಷ್ಟೂ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಿ ಎಲ್ಲಾ ಕ್ಷೇತ್ರಗಳಲ್ಲೂ ಸೌದಿ ಪ್ರಜೆಗಳನ್ನೇ ನೇಮಿಸುವ ಮೂಲಕ ಸೌದೀಕರಣ ಮಾಡುವುದು ಸರಕಾರದ ನೀತಿಯಾಗಿದೆ ಎಂದು ಅವರು ಹೇಳಿದ್ದಾರೆ.
ಕಾರ್ಮಿಕ ಇಲಾಖೆಯು ಈಗಾಗಲೇ ಶಿಫಾರಸ್ ಸ್ವೀಕರಿಸಿದ್ದು ಅದರ ಸಮಗ್ರ ಪರಿಶೀಲನೆ ನಡೆಸುತ್ತಿದೆ ಎಂದು ಅಲ್ ಖಿನಿಝೀ ಹೇಳಿದ್ದಾರೆ.
ಸೌದಿ ಕಾನೂನಿನ ಪ್ರಕಾರ ವಲಸಿಗ ಉದ್ಯೋಗಿಗಳಿಗೆ ಗ್ರೋಸರಿ ಅಂಗಡಿ ನಡೆಸಲು ಅನುಮತಿ ನೀಡಲಾಗುವುದಿಲ್ಲ. ಇದಕ್ಕಾಗಿ ಹೆಚ್ಚಿನವರು ತಮ್ಮ ಪತ್ನಿಯರ ಹೆಸರಿನಲ್ಲಿ ಅನುಮತಿ ತೆಗೆದುಕೊಳ್ಳುತ್ತಾರೆ. ಇಂತಹ ಸಣ್ಣ ಅಂಗಡಿಗಳಿಗಿಂತ ದೊಡ್ಡ - ದೊಡ್ಡ ಅಂಗಡಿಗಳು ಮಾತ್ರ ಇದ್ದರೆ ಗ್ರಾಹಕರಿಗೆ ಉತ್ತಮ ಗುಣಮಟ್ಟ, ಉತ್ತಮ ಸೇವೆ ಸಿಗುತ್ತದೆ. ಮತ್ತು ಉದ್ಯೋಗ ಅವಕಾಶ ಹೆಚ್ಚುತ್ತದೆ ಎಂದು ಅವರು ಹೇಳಿದರು.