×
Ad

ಫ್ಲೆಚೆರ್ ಸಾಹಸ : ವಿಂಡೀಸ್‌ಗೆ ಸುಲಭ ಜಯ

Update: 2016-03-20 23:05 IST

ಬೆಂಗಳೂರು, ಮಾ.20: ವೆಸ್ಟ್‌ಇಂಡೀಸ್ ತಂಡ ಇಂದು ಇಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಏಳು ವಿಕೆಟ್‌ಗಳ ಜಯ ಗಳಿಸಿದೆ.
ಗೆಲುವಿಗೆ 123 ರನ್‌ಗಳ ಸವಾಲನ್ನು ಪಡೆದ ವಿಂಡಿಸ್ ತಂಡ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್‌ ಕಳೆದುಕೊಂಡು 127ರನ್‌ ಗಳಿಸಿ ಗೆಲುವಿನ ದಡ ಸೇರಿತು.
  ವಿಂಡೀಸ್ ತಂಡದ ಆರಂಭಿಕ ದಾಂಡಿಗ ಆ್ಯಂಡ್ರಿ ಫೆಚೆರ್ ಔಟಾಗದೆ 84 ರನ್(73ನಿ, 64ಎ, 6ಬೌ,5ಸಿ) ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಚಾರ್ಲೆಸ್ 10ರನ್, ರಸ್ಸೆಲ್ ಔಟಾಗದೆ 20ರನ್ ಗಳಿಸಿದರು.
ಶ್ರೀಲಂಕಾ 122/9:ನಿಗದಿತ 20 ಓವರ್‌ಗಳಲ್ಲಿ ಶ್ರೀಲಂಕಾ 9 ವಿಕೆಟ್ ನಷ್ಟದಲ್ಲಿ 122 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ ಸ್ಯಾಮುಯೆಲ್ ಬದ್ರಿ ಶಿಸ್ತುಬದ್ಧ ದಾಳಿಯ ಮುಂದೆ ರನ್ ಗಳಿಸಲು ಪರದಾಡಿತು.
ಶ್ರೀಲಂಕಾ ತಂಡದ ಯಾವನೇ ಒಬ್ಬ ಆಟಗಾರನಿಗೂ ಅರ್ಧಶತಕ ದಾಖಲಿಸಲು ಸಾಧ್ಯವಾಗಲಿಲ್ಲ.
    ಶ್ರೀಲಂಕಾ ತಂಡದ ಆರಂಭಿಕ ದಾಂಡಿಗರಾದ ದಿನೇಶ್ ಚಾಂಡಿಮಲ್ ಮತ್ತು ತಿಲಕರತ್ನೆ ದಿಲ್ಶನ್ ಮೊದಲ ವಿಕೆಟ್‌ಗೆ 3.1 ಓವರ್‌ಗಳಲ್ಲಿ 20 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು.
ದಿಲ್ಶನ್ 12 ರನ್ ಗಳಿಸಿ ಬ್ರಾತ್‌ವೈಟ್ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು.ವಿಕೆಟ್ ಕೀಪರ್ ದಿನೇಶ್ ಚಾಂಡಿಮಲ್ 16 ರನ್ ಗಳಿಸಿ ರನೌಟಾದರು.
ತಿರಿಮನ್ನೆ (5) ಮತ್ತು ಕಪುಗೆಡೆರ (6) ಅವರು ಬದ್ರಿ ದಾಳಿ ಎದುರಿಸಲಾರದೆ ಬೇಗನೆ ಪೆವಿಲಿಯನ್ ಸೇರಿದರು.

ಸಿರಿವರ್ಧನ (0) ಖಾತೆ ತೆರೆಯದೆ ಬದ್ರಿಗೆ ವಿಕೆಟ್ ಒಪ್ಪಿಸಿದರು. ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಮತ್ತು ತಿಸ್ಸರ ಪೆರೆರಾ ಆರನೆ ವಿಕೆಟ್‌ಗೆ ಜೊತೆಯಾಟದಲ್ಲಿ ಸ್ಕೋರ್‌ನ್ನು 16 ಓವರ್‌ಗಳಲ್ಲಿ 91ಕ್ಕೆ ತಲುಪಿಸಿದರು. ಮ್ಯಾಥ್ಯೂಸ್ 48 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿ 32 ಎಸೆತಗಳನ್ನು ಎದುರಿಸಿದರು. ಅವರ ಬ್ಯಾಟಿಂಗ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್ ಇರಲಿಲ್ಲ. ಕೇವಲ 20 ರನ್ ಗಳಿಸಿದರು.
ಮ್ಯಾಥ್ಯೂಸ್ ನಿರ್ಗಮನದ ಬಳಿಕ ತಂಡದ ಬ್ಯಾಟಿಂಗ್ ಇನಷ್ಟು ಕುಸಿಯಿತು. ಕುಲಶೇಖರ 7 ರನ್, ಹೆರಾತ್ 3ರನ್ ಮತ್ತು ಕೊನೆಯಲ್ಲಿ ತಿಸ್ಸರಾ ಪೆರೆರಾ ಔಟಾಗುವುದರೊಂದಿಗೆ ಶ್ರೀಲಂಕಾ 9 ವಿಕೆಟ್‌ಗಳನ್ನು ಕಳೆದುಕೊಂಡು ವೆಸ್ಟ್‌ಇಂಡಿಸ್‌ಗೆ 123 ರನ್‌ಗಳ ಗೆಲುವಿನ ಸವಾಲು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News