×
Ad

ಡಿಆರ್‌ಡಿಒದಿಂದ ವಿಕಿರಣ ಮಟ್ಟ ಅಳೆಯುವ ಸೆನ್ಸರ್ ಅಭಿವೃದ್ಧಿ

Update: 2016-03-20 23:32 IST

ಜೈಸಲ್ಮೇರ್, ಮಾ.20: ಯಾವುದೇ ಪರಮಾಣು ಅವಘಡದ ಸಂದರ್ಭದಲ್ಲಿ ವಿಕಿರಣದ ಮಟ್ಟವನ್ನು ಪತ್ತೆ ಹಚ್ಚಬಲ್ಲ ಸೆನ್ಸರ್ ಒಂದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯ(ಡಿಆರ್‌ಡಿಒ) ಜೋಧಪುರ ಪ್ರಯೋಗಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
‘ಡಿರಾಲ್ಡ್ ನ್ಯೂಕ್ಲಿಯರ್’ ಎಂಬ ಈ ಸೆನ್ಸರನ್ನು ಡ್ರೋನ್‌ನ ಮೇಲೆ ಅಳವಡಿಸಬಹುದಾಗಿದೆ. ಅದು 50 ಮೀ. ಎತ್ತರದಿಂದ ಗಾಮಾ ವಿಕಿರಣವನ್ನು ಪತ್ತೆ ಹಚ್ಚಬಲ್ಲುದು.

ಇದು ಬಹುಶಃ ಈ ರೀತಿ ವಿಕಿರಣಶೀಲ ವಸ್ತುವಿನಿಂದಾಗುವ ವಿಕಿರಣವನ್ನು ಪತ್ತೆಹಚ್ಚಬಲ್ಲ ಏಕೈಕ ಉಪಕರಣವಾಗಿದೆಯೆಂಬ ಜೋಧಪುರದ ರಕ್ಷಣಾ ಪ್ರಯೋಗಾಲಯದ ಖ್ಯಾತ ವಿಜ್ಞಾನಿ ಹಾಗೂ ನಿರ್ದೇಶಕ ಎಸ್.ಆರ್. ವಡೇರಾ ತಿಳಿಸಿದ್ದಾರೆ.
ಉದಾಹರಣೆಗೆ, ಮಾಯಾಪುರಿಯಲ್ಲಿ ರೇಡಿಯೊ ಆಕ್ಟಿವ್ ಸೋರಿಕೆಯೊಂದು ಪತ್ತೆ ಹಚ್ಚಲ್ಪಟ್ಟಿದೆ. ಇಂತಹ ಘಟನೆಗಳಲ್ಲಿ, ಈ ಉಪಕರಣವು ಪ್ರದೇಶದ ಮೇಲೆ ಹಾರಾಟ ನಡೆಸುತ್ತದೆ. ವಿಕಿರಣದ ಮೂಲವನ್ನು ಸುಲಭವಾಗಿ ಪತ್ತೆ ಹಚ್ಚಲು ತಮಗೆ ಸಾಧ್ಯವಾಗುತ್ತದೆಂದು ಅವರು ವಿವರಿಸಿದ್ದಾರೆ.
ರಾಜಸ್ಥಾನದ ಪೋಖ್ರಾನ್ ಮರಳುಗಾಡಿಯಲ್ಲಿ ಭಾರತೀಯ ವಾಯುದಳದ ತ್ರೈವಾರ್ಷಿಕ ಕಾರ್ಯಕ್ರಮ ಐಯರ್ನ್ ಫಿಸ್ಟ್- 2016ರಲ್ಲಿ ‘ಡಿರಾಲ್ಡ್ ನ್ಯೂಕ್ಲಿಯರ್’ ಉಪಕರಣವನ್ನು ಡಿಆರ್‌ಡಿಒ ಪ್ರದರ್ಶಿಸಿತ್ತು.
ಸ್ವದೇಶಿ ನಿರ್ಮಿತವಾದ ಈ ಸೆನ್ಸರ್, ತನ್ನ ವಿದ್ಯುಜ್ಜಾಲದೊಂದಿಗೆ ಕೇವಲ 20-22 ಗ್ರಾಂ ತೂಗುತ್ತದೆ. ಈ ಸಂದರ್ಭದಲ್ಲಿ ಸೆನ್ಸರನ್ನು,ಇನ್ನೊಂದು ಸ್ವದೇಶಿ ನಿರ್ಮಿತ, ಕಣ್ಗಾವಲು ಹಾಗೂ ಗೂಢಚರ್ಯೆಗೆ ಬಳಸುವ ಹಗುರ ಯುಎವಿ, ‘ನೇತ್ರ’ ಡ್ರೋನ್‌ಗೆ ಅಳವಡಿಸಲಾಗಿತ್ತು.
ಈ ಉಪಕರಣದ ವೆಚ್ಚ ಸುಮಾರು 20 ಸಾವಿರ ರೂ. ಭಾರತದ ಹೆಚ್ಚುತ್ತಿರುವ ಪರಮಾಣು ಕಾರ್ಯಕ್ರಮಗಳನ್ನು ಪರಿಗಣಿಸಿದಲ್ಲಿ, ಇಂತಹ ಸೆನ್ಸರ್‌ಗಳ ಅಭಿವೃದ್ಧಿ ಅತ್ಯಂತ ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News