ಉತ್ತರಾಖಂಡದ ಕಾಂಗ್ರೆಸ್ ಗುಂಪಿನ ಶಾಸಕರು ಅಜ್ಞಾತ ತಾಣಕ್ಕೆ ರವಾನೆ
ಡೆಹರಾಡೂನ್,ಮಾ.20: ಉತ್ತರಾಖಂಡ್‌ನಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟಿನಿಂದಾಗಿ ಕಳವಳಗೊಂಡಿರುವ ಕಾಂಗ್ರೆಸ್ ಪಕ್ಷವು ತನ್ನ ಮತ್ತು ಪಿಡಿಎಫ್ ಶಾಸಕರನ್ನು ಕುದುರೆ ವ್ಯಾಪಾರದಿಂದ ರಕ್ಷಿಸಿಕೊಳ್ಳಲು ಅವರನ್ನು ಹೆಲಿಕಾಪ್ಟರ್‌ಗಳಲ್ಲಿ ಅಜ್ಞಾತ ಸ್ಥಳಕ್ಕೆ ಸಾಗಿಸಿದೆ. ರಾಜ್ಯದಲ್ಲಿಯ ರಾಜಕೀಯ ಕ್ಷೋಭೆಯನ್ನು ಬಿಜೆಪಿಯಿಂದ ಅಕ್ಷರಶಃ ‘ಎನ್‌ಕೌಂಟರ್’ಎಂದು ಮುಖ್ಯಮಂತ್ರಿ ಹರೀಶ ರಾವತ್ ಬಣ್ಣಿಸಿದ್ದಾರೆ.
ಕಾಂಗ್ರೆಸ್ ಮತ್ತು ಪಿಡಿಎಫ್ ಶಾಸಕರ ಗುಂಪು ಮುಖ್ಯಮಂತ್ರಿಗಳ ಕೈಗಾರಿಕಾ ಸಲಹೆಗಾರ ರಂಜಿತ್ ರಾವತ್ ಅವರ ನೇತೃತ್ವದಲ್ಲಿ ರವಿವಾರ ನಗರದ ಸಹಸ್ತ್ರಧಾರಾ ಹೆಲಿಪ್ಯಾಡ್‌ನಿಂದ ಮೂರು ಹೆಲಿಕಾಪ್ಟರ್‌ಗಳಲ್ಲಿ ಪ್ರಯಾಣ ಬೆಳೆಸಿತು. ಇದು ಇನ್ನಷ್ಟು ಶಾಸಕರು ಬಿಜೆಪಿ ಮಡಿಲು ಸೇರುವುದನ್ನು ತಪ್ಪಿಸುವ ಮುಖ್ಯಮಂತ್ರಿಗಳ ಪ್ರಯತ್ನವಾಗಿದೆ ಎನ್ನಲಾಗಿದೆ.
ಮೇಲ್ನೋಟಕ್ಕೆ ಧೈರ್ಯದ ಮುಖವಾಡ ಧರಿಸಿದ್ದರೂ ಮಾ.28ರಂದು ಸದನದಲ್ಲಿ ನಡೆಯಲಿರುವ ಸತ್ವಪರೀಕ್ಷೆಗೆ ಮುನ್ನ ಇನ್ನಷ್ಟು ಶಾಸಕರನ್ನು ಕಳೆದುಕೊಳ್ಳುವ ಆತಂಕ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿರುವುದು ಸುಳ್ಳಲ್ಲ ಎನ್ನುವುದು ವೀಕ್ಷಕರ ಅಭಿಪ್ರಾಯವಾಗಿದೆ. ಇದಕ್ಕೆ ಹೆಚ್ಚಿನ ಅರ್ಥ ಕಲ್ಪಿಸಬೇಕಿಲ್ಲ, ಹೋಳಿಗೆ ಮುನ್ನ ಶಾಸಕರು ಪ್ರವಾಸಕ್ಕೆ ತೆರಳಿದ್ದಾರೆ ಎಂದು ಹಿಮಾಚಲ ಪ್ರದೇಶ ಕಾಂಗ್ರೆಸ್ ನಾಯಕರು ಸಮಜಾಯಿಷಿ ನೀಡಿದ್ದಾರೆ.