ಇನ್ನೊಬ್ಬ ಸೈನಿಕನ ಮೃತದೇಹ ಪತ್ತೆ
Update: 2016-03-20 23:34 IST
ಹೊಸದಿಲ್ಲಿ, ಮಾ.20: ಜಮ್ಮು-ಕಾಶ್ಮೀರದ ಕಾರ್ಗಿಲ್ ವಲಯದಲ್ಲಿ ಹಿಮಪಾತದ ಬಳಿಕ ಕಾಣೆಯಾಗಿದ್ದ ಯೋಧನೊಬ್ಬನ ಮೃತ ದೇಹವು ಮೂರು ದಿನಗಳ ಸತತ ಶೋಧದ ಬಳಿಕ ಇಂದು ಪತ್ತೆಯಾಗಿದೆ.
ಲಘು ಭೂಕಂಪದಿಂದ ಮಾ.17ರಂದು ಉಂಟಾಗಿದ್ದ ಹಿಮಪಾತವು ಕಾರ್ಗಿಲ್‌ನಲ್ಲಿ ಇಬ್ಬರು ಸೈನಿಕರನ್ನು ಕೊಚ್ಚಿಕೊಂಡು ಹೋಗಿತ್ತು. ಕೂಡಲೇ ಕಾರ್ಯಾಚರಣೆ ಆರಂಭಿಸಿದ ಸೇನೆ ಸಿಪಾಯಿ ಸುಜಿತ್ ಎಂಬವರನ್ನು ರಕ್ಷಿಸಿತ್ತು. ಅವರ ಸ್ಥಿತಿ ಸ್ಥಿರವಿದ್ದು ಚೆನ್ನಾಗಿ ಸುಧಾರಿಸುತ್ತಿದ್ದಾರೆ.
ಸಿಪಾಯಿ ವಿಜಯ್ ಕುಮಾರ್ ಎಂಬವರ ರಕ್ಷಣಾ ಕಾರ್ಯಾಚರಣೆ ಪ್ರತಿಕೂಲ ಹವಾಮಾನದಲ್ಲೂ ಸತತ ಮೂರು ದಿನ ಮುಂದುವರಿದು , 12 ಅಡಿ ಹಿಮದಾಳದಲ್ಲಿ ಇಂದವರ ಮೃತದೇಹ ಪತ್ತೆಯಾಗಿದೆ.
ವಿಜಯ ಕುಮಾರ್ ತಂದೆ-ತಾಯಿ ಮತ್ತು ಇಬ್ಬರು ತಂಗಿಯರನ್ನು ಅಗಲಿದ್ದಾರೆ.
ಅವರ ಪಾರ್ಥಿವ ಶರೀರವನ್ನು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ತವರು ಗ್ರಾಮ ವಲ್ಲರಾಮಪುರಂಗೆ ಕಳುಹಿಸಲಾಗುವುದು.