×
Ad

ಚುನಾವಣೆ: ಅಭ್ಯರ್ಥಿಗಳಿಗೆ ದಾಖಲೆ ಸಲ್ಲಿಕೆಯಲ್ಲಿ ನೆರವಾಗಲು ಇಸಿಆರ್‌ಪಿಗಳ ನಿಯೋಜನೆ

Update: 2016-03-20 23:34 IST

ಹೊಸದಿಲ್ಲಿ,ಮಾ.20: ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಅಭ್ಯರ್ಥಿಗಳು ನಿಖರವಾದ ಮಾಹಿತಿಗಳನ್ನು ಸಲ್ಲಿಸುವಂತೆ ಮಾಡಲು ಚುನಾವಣಾ ಆಯೋಗವು ಅಭ್ಯರ್ಥಿಗಳಿಗೆ ತಮ್ಮ ಅಫಿದಾವತ್ತುಗಳು ಮತ್ತು ವೆಚ್ಚ ದಾಖಲೆಗಳನ್ನು ಸಲ್ಲಿಸುವಲ್ಲಿ ನೆರವಾಗಲು ವಿಶೇಷವಾಗಿ ತರಬೇತುಗೊಂಡ ನೂರಾರು ‘ರಿಟರ್ನ್ ಪ್ರಿಪೇರರ್ಸ್ ’ಗಳನ್ನು ನಿಯೋಜಿಸಿದೆ.

 
ಇಲೆಕ್ಷನ್ ಕಮಿಷನ್ ರಿಟರ್ನ್ ಪ್ರಿಪೇರರ್ಸ್(ಇಸಿಆರ್‌ಪಿ) ಎಂದು ಹೆಸರಿಸಲಾಗಿರುವ ಈ ನೂತನ ವ್ಯವಸ್ಥೆಯು ಎ.4ರಿಂದ ಮತದಾನ ನಡೆಯಲಿರುವ ನಾಲ್ಕು ರಾಜ್ಯಗಳಾದ ಪ.ಬಂಗಾಲ,ಅಸ್ಸಾಂ, ತಮಿಳುನಾಡು ಮತ್ತು ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಗಳ ಪ್ರತಿಯೊಂದೂ ಜಿಲ್ಲೆಯಲ್ಲಿ ಲಭ್ಯವಿರುತ್ತದೆ.
ಅಫಿದಾವತ್ತುಗಳು ಮತ್ತು ಚುನಾವಣೆಗಾಗಿ ಮಾಡಿದ ವೆಚ್ಚದ ವಿವರಗಳ ಹೇಳಿಕೆಗಳ ಇ-ಫೈಲಿಂಗ್‌ನಲ್ಲಿ ಅಭ್ಯರ್ಥಿಗಳಿಗೆ ನೆರವಾಗುವುದು ಇಸಿಆರ್‌ಪಿಗಳ ಮುಖ್ಯ ಕೆಲಸವಾಗಿರುತ್ತದೆ.
ಯೋಜನೆಯನ್ನು ಜನಪ್ರಿಯಗೊಳಿಸಲು ಮತ್ತು ಅರ್ಭ್ಯರ್ಥಿಗಳಿಗೆ ತಮ್ಮ ಕೆಲಸಗಳನ್ನು ಸುಲಭಗೊಳಿಸಲು ಪಿಪೇರರ್ಸ್‌ಗಳ ಸೇವೆಗೆ ತಗಲುವ ಎಲ್ಲ ವೆಚ್ಚಗಳನ್ನು ತಾನೇ ಭರಿಸಲು ಚುನಾವಣಾ ಆಯೋಗವು ನಿರ್ಧರಿಸಿದೆ.
ಓರ್ವ ಅಭ್ಯರ್ಥಿಗೆ ಒದಗಿಸುವ ಸೇವೆಗಾಗಿ ಇಸಿಆರ್‌ಪಿಗಳಿಗೆ ಆಯೋಗವು 1,200 ರೂ.ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಆದಾಯ ತೆರಿಗೆ ಇಲಾಖೆಯು 2006-07ರಲ್ಲಿ ಜಾರಿಗೊಳಿಸಿದ್ದ ಟ್ಯಾಕ್ಸ್ ರಿಟರ್ನ್ ಪ್ರಿಪೇರರ್ ಸ್ಕೀಮ್‌ನ ಸ್ಫೂರ್ತಿ ಪಡೆದು ಚುನಾವಣಾ ಆಯೋಗವು ಈ ನೂತನ ಯೋಜನೆಯನ್ನು ರೂಪಿಸಿದೆ. ಆಯೋಗವು ನೇಮಿಸಿಕೊಂಡಿರುವ ಹೆಚ್ಚಿನ ಇಸಿಆರ್‌ಪಿಗಳು ಆದಾಯ ತೆರಿಗೆ ಇಲಾಖೆಯ ರಿಟರ್ನ್ ಪ್ರಿಪೇರರ್ ಆಗಿ ಕೆಲಸ ಮಾಡಿರುವ ಅನುಭವಿಗಳೇ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News