ಔಷಧ ಕಂಪೆನಿಗಳ ಅರ್ಜಿಗಳ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ಪುನರಾರಂಭ
ಹೊಸದಿಲ್ಲಿ,ಮಾ.20: ತಮ್ಮ ಕೆಲವು ನಿಗದಿತ ಡೋಸ್‌ನ ಸಂಯೋಜಿತ ಔಷಧಗಳ ಮಾರಾಟವನ್ನು ನಿಷೇಧಿಸುವ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಫೈಜರ್, ಗ್ಲೆನ್‌ಮಾರ್ಕ್,ಪಿ ಆ್ಯಂಡ್ ಜಿ ಮತ್ತು ಸಿಪ್ಲಾ ಸೇರಿದಂತೆ 30ಕ್ಕೂ ಅಧಿಕ ಔಷಧ ತಯಾರಿಕೆ ಕಂಪೆನಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರದಿಂದ ಪುನರಾರಂಭಿಸುವ ಸಾಧ್ಯತೆಯಿದೆ.
ನ್ಯಾಯಮೂರ್ತಿ ರಾಜೀವ ಸಹಾಯ್ ಎಂಡ್ಲಾ ಅವರು ಸರಕಾರದ ಅಧಿಸೂಚನೆಗೆ ಮಾ.21ರವರೆಗೆ ತಡೆಯಾಜ್ಞೆಯನ್ನು ನೀಡಿದ್ದರು. ಆರಂಭದಲ್ಲಿ ಮಾ.14ರಂದು ಫೈಜರ್ ಕಂಪೆನಿಯ ಕೆಮ್ಮಿನ ಸಿರಪ್ ‘ಕೋರೆಕ್ಸ್ ’ಗೆ ಮಧ್ಯಂತರ ಪರಿಹಾರವನ್ನು ನೀಡಿದ್ದ ನ್ಯಾಯಾಲಯವು ಬಳಿಕ ಅದನ್ನು ಗ್ಲಾಕ್ಸೋ,ಸ್ಮಿಥ್‌ಕ್ಲೈನ್,ಅಬಟ್ ಹೆಲ್ತ್‌ಕೇರ್, ಪಿರಾಮಲ್ ಮತ್ತು ಲುಪಿನ್ ಸೇರಿದಂತೆ ಇನ್ನೂ 30ಕ್ಕೂ ಅಧಿಕ ಕಂಪೆನಿಗಳಿಗೆ ವಿಸ್ತರಿಸಿತ್ತು.
ಸರಕಾರವು ನಿಷೇಧಿಸಲು ನಿರ್ಧರಿಸಿರುವ ಔಷಧಗಳಲ್ಲಿ ಗ್ಲಾಕ್ಸೋದ ಪಿರಿಟನ್,ಪಿ ಆ್ಯಂಡ್ ಜಿಯ ವಿಕ್ಸ್ ಆ್ಯಕ್ಷನ್ 500 ಎಕ್ಷಟ್ರಾ,ರೆಕಿಟ್‌ನ ಡಿ ಕೋಲ್ಡ್,ಪಿರಾಮಲ್‌ನ ಸಾರಿಡಾನ್,ಗ್ಲೆನ್‌ಮಾರ್ಕ್‌ನ ಆಸ್ಕೊರಿಲ್ ಮತ್ತು ಅಲೆಕ್ಸ್ ಇತ್ಯಾದಿಗಳು ಸೇರಿವೆ.