×
Ad

ಚುನಾವಣಾ ಆಯೋಗದಿಂದ ಅನಧಿಕೃತ ರೂ.1 ಕೋಟಿ ವಶ

Update: 2016-03-20 23:45 IST

ಕೋಲ್ಕತಾ, ಮಾ.20: ಪಶ್ಚಿಮಬಂಗಾಳದ ಚುನಾವಣೆ ನಡೆಯುವ ಜಿಲ್ಲೆಗಳಾದ್ಯಂತ ಕಳೆದ 18 ದಿನಗಳಲ್ಲಿ ರೂ. 1 ಕೋಟಿ ವಶಪಡಿಸಿಕೊಳ್ಳಲಾಗಿದೆಯೆಂದು ಚುನಾವಣಾ ಆಯೋಗವು ಶನಿವಾರ ತಿಳಿಸಿದೆ.
ಆಯೋಗದ ಸಂಚಾರಿ ಹಾಗೂ ತಟಸ್ಥ ಸ್ಕ್ವಾಡ್‌ಗಳು ಈ ಹಣವನ್ನು ವಶಪಡಿಸಿಕೊಂಡಿವೆಯೆಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ. ತಮ್ಮ, ಖರ್ಚು ನಿಗಾ ಕಾರ್ಯಾಚರಣೆಯ ಭಾಗವಾಗಿ, ಕಳೆದ 18 ದಿನಗಳಲ್ಲಿ ತಮ್ಮ ಸಂಚಾರಿ ದಳವು ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ರೂ. 69 ಲಕ್ಷಗಳನ್ನು ಜಿಲ್ಲೆಗಳಲ್ಲಿ ವಶಪಡಿಸಿಕೊಂಡಿದ್ದರೆ, ತಟಸ್ಥ ದಳವು ಕೋಲ್ಕತಾದ ಬುರ್ರಾಬಝಾರ್ ಪೊಲೀಸ್ ವ್ಯಾಪ್ತಿಯಲ್ಲಿ ರೂ. 31.50 ಲಕ್ಷಗಳನ್ನು ವಶಪಡಿಸಿಕೊಂಡಿದೆಯೆಂದು ಚುನಾವಣಾ ಆಯೋಗದ ಜಂಟಿ ಮುಖ್ಯ ಚುನಾವಣಾಧಿಕಾರಿ ಅಮಿತಾಭ್ ಸೇನ್‌ಗುಪ್ತಾ ವಿವರಿಸಿದ್ದಾರೆ.

ಈ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ. ತಾವು ಸಕ್ಷಮ ನ್ಯಾಯಾಲಯಕ್ಕೆ ಹೋಗಿದ್ದೇವೆ. ತನಿಖೆ ಬಾಕಿಯಿದೆಯೆಂದು ಅವರು ತಿಳಿಸಿದ್ದಾರೆ.ಚುನಾವಣಾ ಖರ್ಚು ನಿಗಾ ಕಾರ್ಯಾಚರಣೆಗಾಗಿ 908 ಸಂಚಾರಿ ದಳಗಳು 21 ಜಿಲ್ಲೆಗಳಾದ್ಯಂತ ಗಸ್ತು ನಡೆಸುತ್ತಿವೆ. 624 ತಟಸ್ಥ ತಂಡಗಳನ್ನು ಚುನಾವಣಾ ಖರ್ಚಿನ ಮೇಲೆ ಕಣ್ಣಿಡಲು ನಿಯೋಜಿಸಲಾಗಿದೆಯೆಂದು ಸೇನ್‌ಗುಪ್ತಾ ಹೇಳಿದ್ದಾರೆ. ಸಂಚಾರಿ ದಳಗಳು ಎಲ್ಲೆಲ್ಲಿವೆಯೆಂಬುದನ್ನು ಪತ್ತೆ ಹಚ್ಚಲು ಅವುಗಳ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ. ಈ ದಳಗಳು ಆಯೋಗದ ನಿಯಂತ್ರಣ ಕೊಠಡಿಗೆ ನೇರವಾಗಿ ಚಿತ್ರಗಳನ್ನು ರವಾನಿಸಬಹುದಾಗಿದೆ. ನಿಯಂತ್ರಣ ಕೊಠಡಿಯಿಂದ ಯಾವುದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಕುರಿತು ಮಾಹಿತಿ ಬಂದೊಡನೆಯೇ, ಆಯೋಗದ ಆದೇಶದಂತೆ ಸಂಚಾರಿ ದಳಗಳು 30 ನಿಮಿಷಗಳ ಒಳಗಾಗಿ ಮಧ್ಯಪ್ರವೇಶಿಸುವವೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News