ಇರಾನ್ ಮೇಲೆ ಅಮೆರಿಕದ ಹದ್ದುಗಣ್ಣು: ಜೋ ಬೈಡನ್
Update: 2016-03-21 20:00 IST
ವಾಶಿಂಗ್ಟನ್, ಮಾ. 21: ಇರಾನ್ ಪರಮಾಣು ಒಪ್ಪಂದವನ್ನು ಅನುಸರಿಸುವಂತೆ ಖಾತರಿಪಡಿಸಲು ಅಮೆರಿಕ ಆ ದೇಶದ ಮೇಲೆ ಹದ್ದುಗಣ್ಣಿಟ್ಟಿದೆ ಎಂದು ಅಮೆರಿಕದ ಉಪಾಧ್ಯಕ್ಷ ಜೋ ಬೈಡನ್ ರವಿವಾರ ಹೇಳಿದ್ದಾರೆ.
ಅಮೆರಿಕ ಸೇರಿದಂತೆ ಆರು ಶಕ್ತ ದೇಶಗಳು ಮತ್ತು ಇರಾನ್ ನಡುವೆ ಕಳೆದ ವರ್ಷದ ಜುಲೈ ತಿಂಗಳಲ್ಲಿ ಪರಮಾಣು ಒಪ್ಪಂದ ಜಾರಿಗೆ ಬಂದಿತ್ತು. ವಿಶ್ವಸಂಸ್ಥೆ ಮತ್ತು ಪಾಶ್ಚಾತ್ಯ ದೇಶಗಳು ವಿಧಿಸಿರುವ ದಿಗ್ಬಂಧನೆಗಳನ್ನು ತೆರವುಗೊಳಿಸುವುದಕ್ಕೆ ಪ್ರತಿಯಾಗಿ ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಕಡಿಮೆಗೊಳಿಸಬೇಕು ಎನ್ನುವುದು ಒಪ್ಪಂದದ ಪ್ರಮುಖ ಅಂಶವಾಗಿದೆ.
‘‘ಈ ಒಪ್ಪಂದದ ಪ್ರಕಾರ, ಇರಾನ್ ಎಂದಿಗೂ ಪರಮಾಣು ಶಸ್ತ್ರಗಳ ನಿರ್ಮಾಣಕ್ಕೆ ಕಾರಣವಾಗುವ ಚಟುವಟಿಕೆಗಳನ್ನು ನಡೆಸುವಂತಿಲ್ಲ’’ ಎಂದು ಅಮೆರಿಕನ್ ಇಸ್ರೇಲ್ ಪಬ್ಲಿಕ್ ಅಫೇರ್ಸ್ ಕಮಿಟಿ (ಎಐಪಿಎಸಿ) ಲಾಬಿ ಗುಂಪಿನ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು ಹೇಳಿದರು.