×
Ad

ದಾರಿ ತೋರಿಸುವವರೇ ದಾರಿ ತಪ್ಪಿದರೆ?

Update: 2016-03-21 22:24 IST

ಸರಕಾರ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಘೋಷಣೆ ಮಾಡಿದ ಬೆನ್ನಿಗೇ, ಶಿಕ್ಷಕರು ವೌಲ್ಯಮಾಪನ ಬಹಿಷ್ಕಾರಕ್ಕೆ ಕರೆ ನೀಡುವುದು ಒಂದು ಸಂಪ್ರದಾಯದ ರೂಪದಲ್ಲಿ ಪಾಲನೆಯಾಗುತ್ತಿದೆ. ಇದೊಂದು ರೀತಿಯಲ್ಲಿ ‘ಟಾಮ್ ಆ್ಯಂಡ್ ಜೆರ್ರಿ’ ಕಾರ್ಟೂನ್ ಸೀರಿಯಲ್‌ನಂತಿದೆ. ನಿರ್ಣಾಯಕ ಸಂದರ್ಭದಲ್ಲಿ, ತಮ್ಮದೇ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿಟ್ಟುಕೊಂಡು ಶಿಕ್ಷಕರು ಪ್ರತಿಭಟನೆ ನಡೆಸುವುದು, ಸರಕಾರ ‘ಭರವಸೆ ನೀಡುವುದು’ ಆ ಬಳಿಕ ಶಿಕ್ಷಕರು ಮುಷ್ಕರವನ್ನು ಹಿಂದಕ್ಕೆ ತೆಗೆಯುವುದು ಈ ಹಿಂದೆಯೂ ನಡೆದಿದೆ. ಬಳಿಕ, ಕೊಟ್ಟ ಭರವಸೆಯನ್ನು ಸರಕಾರ ಮರೆತು ಬಿಡುತ್ತದೆ. ಮತ್ತೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಘೋಷಣೆಯಾಗುವುದನ್ನು ಶಿಕ್ಷಕರು ಕಾಯುತ್ತಿರುತ್ತಾರೆ. ಇದೀಗ ಪಿಯುಸಿ ಪರೀಕ್ಷೆ ಮುಗಿಯುತ್ತಾ ಬರುತ್ತಿದ್ದಂತೆಯೇ ಪದವಿಪೂರ್ವ ಉಪನ್ಯಾಸಕರು, ಪ್ರಾಂಶುಪಾಲರ ಸಂಘಗಳ ಪದಾಕಾರಿಗಳ ಸಭೆಯಲ್ಲಿ ಮತ್ತೆ ವೌಲ್ಯಮಾಪನ ಬಹಿಷ್ಕಾರವನ್ನು ಘೋಷಿಸಲಾಗಿದೆ. ವೇತನ ತಾರತಮ್ಯದ ಕುರಿತಂತೆ ತಮ್ಮ ಬೇಡಿಕೆಗಳನ್ನು ಸರಕಾರ ಪರಿಶೀಲಿಸುತ್ತಿಲ್ಲ ಎನ್ನುವುದು ಅವರ ಆರೋಪವಾಗಿದೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆಯಂತೆ ಸರಕಾರ ಮತ್ತು ಶಿಕ್ಷಕರ ನಡುವಿನ ಈ ಜಗ್ಗಾಟಕ್ಕೆ ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ.
ಪ್ರತಿಭಟನೆ ತಪ್ಪಲ್ಲ. ತಮ್ಮ ಬೇಡಿಕೆಗಳಿಗಾಗಿ ಶಿಕ್ಷಕರು ಬೀದಿಗಿಳಿಯುವುದು, ಪ್ರತಿಭಟನೆ ಮಾಡುವುದು ಸಂವಿಧಾನದತ್ತ ಹಕ್ಕು. ಆದರೆ ಅದಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಮಾಡುವುದು ತಪ್ಪು. ಹೇಗೆ, ಬಾಕಿ ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡುವುದು ತಪ್ಪೋ, ಹಾಗೆಯೇ, ತನ್ನ ಬೇಡಿಕೆ ಗಳಿಗಾಗಿ ವಿದ್ಯಾರ್ಥಿಗಳ ಬದುಕಿನ ಜೊತೆಗೆ ಶಿಕ್ಷಕರು ಚೆಲ್ಲಾಟ ನಡೆಸುವುದು ಸಂವಿಧಾನದತ್ತ ಪ್ರತಿಭಟನೆಯಾಗುವುದಿಲ್ಲ. ಶಿಕ್ಷಕರಿಗೆ ಪ್ರತಿಭಟನೆ ಮಾಡಲೇಬೇಕು ಎಂದಿದ್ದರೆ ಇತರ ಅವಯಲ್ಲಿ ಮಾಡಬಹುದಿತ್ತು. ಶಾಲೆಗಳಿಗೆ ತೆರಳಿ ಪಾಠ ಮಾಡುವುದಿಲ್ಲ ಎನ್ನಬಹುದಿತ್ತು. ಆದರೆ ಈ ನಿರ್ಣಾಯಕ ಗಳಿಗೆಯಲ್ಲಿ ವೌಲ್ಯ ಮಾಪನ ಮಾಡುವುದಿಲ್ಲ ಎಂದು ಪಟ್ಟು ಹಿಡಿದರೆ, ಫಲಿತಾಂಶ ಘೋಷಣೆಯ ವೇಳೆ ಭಾರೀ ದುಷ್ಪರಿಣಾಮ ಉಂಟಾಗುತ್ತದೆ. ಸರಿಯಾದ ಹೊತ್ತಿನಲ್ಲಿ ಲಿತಾಂಶ ಘೋಷಣೆಯಾಗದೇ ಇದ್ದರೆ, ಮುಂದಿನ ಓದು, ಭವಿಷ್ಯದ ಬಗ್ಗೆ ಆಲೋಚಿಸುವುದಕ್ಕೆ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಉನ್ನತ ವಿದ್ಯಾಭ್ಯಾಸಕ್ಕೆ ಧಕ್ಕೆ ಉಂಟಾಗುತ್ತದೆ. ಅಷ್ಟೇ ಅಲ್ಲ, ಮುಷ್ಕರ ಮುಗಿದ ಬಳಿಕ ಶಿಕ್ಷಕರು ಅವಸರವಸರವಾಗಿ ವೌಲ್ಯಮಾಪನ ಮಾಡುವುದರಿಂದ ಇನ್ನಷ್ಟು ಅನಾಹುತಗಳಾಗುತ್ತವೆ. ಒಟ್ಟಿನಲ್ಲಿ ಈ ಮುಷ್ಕರದ ಸರ್ವ ಒತ್ತಡಗಳನ್ನು ಎದುರಿಸಬೇಕಾದವರು ವಿದ್ಯಾರ್ಥಿಗಳು. ಯಾವ ವಿದ್ಯಾರ್ಥಿಗಳ ಬದುಕಿಗೆ ಶಿಕ್ಷಕರು ದಾರಿದೀಪವಾಗಬೇಕೋ, ಆ ವಿದ್ಯಾರ್ಥಿಗಳ ಪಾಲಿಗೆ ತೊಡಕುಗಳನ್ನು ತಂದಿಡುವಲ್ಲಿ ಶಿಕ್ಷಕರು ಕಾರಣರಾಗುತ್ತಾರೆ.

ಕೆಲವು ಹುದ್ದೆಗಳನ್ನು ನಾವು ವೃತ್ತಿ ಎಂದು ಕರೆಯುವುದಿಲ್ಲ. ಅದನ್ನು ಸೇವೆ ಎಂದು ಗೌರವಿಸುತ್ತೇವೆ. ಯೋಧ, ವೈದ್ಯ ಮತ್ತು ಶಿಕ್ಷಕರು ಈ ಸಾಲಿನಲ್ಲಿ ಬರುತ್ತಾರೆ. ಅತ್ಯಂತ ಕಠಿಣ ವಾತಾವರಣದಲ್ಲಿ ಸೇವೆ ಸಲ್ಲಿಸುವಂತಹ ಯೋಧ, ನಾಳೆ ಯುದ್ಧದ ಹೊತ್ತಿನಲ್ಲಿ ತನ್ನ ಬೇಡಿಕೆಗಾಗಿ ಮುಷ್ಕರಕ್ಕೆ ಇಳಿದು ಬಿಟ್ಟರೆ ಈ ದೇಶದ ಸ್ಥಿತಿ ಏನಾಗಬೇಕು? ವೈದ್ಯರೂ ಅಷ್ಟೇ. ದೇಶದಲ್ಲಿ ಸಾಂಕ್ರಾಮಿಕ ರೋಗಗಳು ವ್ಯಾಪಕ ವಾಗಿರುವ ಸಂದರ್ಭದಲ್ಲೇ, ವೈದ್ಯರು ತಮ್ಮ ಬೇಡಿಕೆಗಳಿಗಾಗಿ ಬೀದಿಗಿಳಿದು ಬಿಟ್ಟರೆ ಅವರ ವೃತ್ತಿ ಗೌರವವೇನಾಗಬೇಕು? ಜನರ ಸ್ಥಿತಿಯೇನಾಗಬೇಕು? ಇತ್ತೀಚಿನ ದಿನಗಳಲ್ಲಿ ವೈದ್ಯರೂ ಆಗಾಗ ಮುಷ್ಕರಕ್ಕಿಳಿದು ಜನ ಸಾಮಾನ್ಯರ ಬದುಕಿನಲ್ಲಿ ಆಟವಾಡುವುದಿದೆ. ಆ ಮೂಲಕ ತಮ್ಮ ವೃತ್ತಿಯ ವೌಲ್ಯವನ್ನು ಗಾಳಿಗೆ ತೂರುವುದಿದೆ. ಆಸ್ಪತ್ರೆ ಎನ್ನುವುದು ದುಡ್ಡು ಸುಲಿಯುವ ಉದ್ಯಮವಾಗಿ ಪರಿವರ್ತನೆಯಾದ ಪರಿಣಾಮ ಇರಬಹುದು. ಆದರೆ ಸಮಾಜಕ್ಕೆ ನೈತಿಕ ವೌಲ್ಯದ ಪಾಠ ಹೇಳಬೇಕಾದ ಶಿಕ್ಷಕರು ಕೂಡ ಇಂತಹ ವರ್ತನೆಯನ್ನು ಪ್ರದರ್ಶಿಸಿದರೆ, ಈ ಸಮಾಜವನ್ನು ತಿದ್ದುವವರಾರು?

ಇದೇ ಸಂದರ್ಭದಲ್ಲಿ ಉಳಿದೆಲ್ಲ ಮುಷ್ಕರಗಳನ್ನು ಗಂಭೀರವಾಗಿ ಸ್ವೀಕರಿಸಿದಂತೆ, ಸರಕಾರ ಉಪನ್ಯಾಸಕರ ಮುಷ್ಕರವನ್ನು ಸ್ವೀಕರಿಸುತ್ತಿಲ್ಲ. ಇಲ್ಲವಾದರೆ ಶಿಕ್ಷಕರು ಮತ್ತು ಸರಕಾರದ ನಡುವಿನ ತಿಕ್ಕಾಟ ಇಲ್ಲಿಯವರೆಗೆ ಬೆಳೆಯುತ್ತಿರಲಿಲ್ಲ. ಕಳೆದ ಎಂಟು ವರ್ಷಗಳಿಂದ ಉಪನ್ಯಾಸಕರು ಮುಷ್ಕರ ನಡೆಸುವುದು, ಸರಕಾರ ಭರವಸೆ ನೀಡುವುದು ನಡೆಯುತ್ತಲೇ ಬರುತ್ತಿದೆ. ಬೇರೆ ಸರಕಾರಿ ಸಿಬ್ಬಂದಿ ಮುಷ್ಕರ ನಡೆಸಿದರೆ, ಇಡೀ ಜನಜೀವನ ಅಸ್ತವ್ಯಸ್ತವಾಗುತ್ತದೆ. ಆದುದರಿಂದ ಸರಕಾರ ಅವರಿಗೆ ತಕ್ಷಣ ಸ್ಪಂದಿಸುತ್ತದೆ. ಆದರೆ ಶಿಕ್ಷಕರು ಮುಷ್ಕರ ನಡೆಸಿದರೆ ಅದರಿಂದ ತೊಂದರೆ ಅನುಭವಿಸುವವರು ವಿದ್ಯಾರ್ಥಿಗಳು ಮಾತ್ರ. ಈ ಹಿನ್ನೆಲೆಯಲ್ಲಿಯೇ ಉಪನ್ಯಾಸರ ಬೇಡಿಕೆಗಳನ್ನು, ಪ್ರತಿಭಟನೆಯನ್ನು ಹಗುರವಾಗಿ ತೆಗೆದುಕೊಳ್ಳುತ್ತಾ ಬಂದಿದೆ. ಶಿಕ್ಷಣ ಕ್ಷೇತ್ರವನ್ನು ಸರಕಾರ ಎಷ್ಟರ ಮಟ್ಟಿಗೆ ಗಂಭೀರವಾಗಿ ಸ್ವೀಕರಿಸಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಸರಕಾರ ಕೇವಲ ಕಾಟಾಚಾರದ ಭರವಸೆಯನ್ನು ನೀಡದೇ, ಶಿಕ್ಷಕರ ಸಮಸ್ಯೆಗಳನ್ನು, ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸುವ ಕಡೆಗೆ ಗಮನ ಹರಿಸಬೇಕಾಗಿದೆ. ಹಾಗೆಯೇ ಮುಷ್ಕರಕ್ಕಿಳಿದ ಬಳಿಕ ಅವರೊಂದಿಗೆ ಮಾತುಕತೆ ನಡೆಸದೆ, ಅದಕ್ಕೆ ಮುನ್ನವೇ ಅವರ ಸಂಘಟನೆಯ ಜೊತೆಗೆ ಮಾತುಕತೆಗೆ ಮುಂದಾಗಬೇಕು. ಮುಷ್ಕರ ಹೂಡದಂತೆ ಅವರ ಮನವೊಲಿಸಬೇಕು. ವಿದ್ಯಾರ್ಥಿಗಳನ್ನು ಗುರಾಣಿಯಾಗಿಟ್ಟುಕೊಂಡು ಶಿಕ್ಷಕರು ಸರಕಾರದ ಕಡೆಗೆ ಬಾಣ ಬಿಟ್ಟರೆ, ಅದರ ಹಾನಿಯುಂಟಾಗುವುದು ತಾವೇ ತಿದ್ದಿ ತೀಡಿದ ವಿದ್ಯಾರ್ಥಿಗಳಿಗೆ ಎನ್ನುವುದನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು. ಸಮಾಜವನ್ನು ಸರಿದಾರಿಗೆ ಕರೆತರಬೇಕಾದ ಶಿಕ್ಷಕರೇ ಹೀಗೆ ಅಡ್ಡ ದಾರಿಹಿಡಿದರೆ, ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ ಎಂದು ಅವರನ್ನು ದೂಷಿಸಿ ಫಲವೇನು? ತಮ್ಮ ವರ್ತನೆಗಳನ್ನು ವಿದ್ಯಾರ್ಥಿಗಳು ಗಮನಿಸುತ್ತಿದ್ದಾರೆ ಎಂಬ ಎಚ್ಚರಿಕೆ ಶಿಕ್ಷಕರಿಗೆ ಬೇಕಾಗಿದೆ. ತಮ್ಮ ಬೇಡಿಕೆಗಳಿಗಾಗಿ ಅಡ್ಡ ದಾರಿ ಹಿಡಿಯುವ ಶಿಕ್ಷಕರು ಬಳಿಕ, ವಿದ್ಯಾರ್ಥಿಗಳನ್ನು ಯಾವ ಮುಖದಿಂದ ಎದುರುಗೊಳ್ಳುತ್ತಾರೆ? ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಅವರಲ್ಲೇನು ಉತ್ತರವಿದೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News