ಇಸ್ಲಾಮಾಬಾದ್, ರಾವಲ್ಪಿಂಡಿಯಲ್ಲಿ ಮೊಬೈಲ್ ಫೋನ್ ಸೇವೆ ಸ್ಥಗಿತ
Update: 2016-03-21 23:42 IST
ಇಸ್ಲಾಮಾಬಾದ್, ಮಾ. 21: ಪಾಕಿಸ್ತಾನ ದಿನಾಚರಣೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ತಾಲೀಮುಗಳಿಗೆ ಅಡಚಣೆಯುಂಟು ಮಾಡಲು ಭಯೋತ್ಪಾದಕರು ನಡೆಸಬಹುದಾದ ಪ್ರಯತ್ನಗಳನ್ನು ವಿಫಲಗೊಳಿಸುವ ಸಲುವಾಗಿ ರಾಜಧಾನಿ ಇಸ್ಲಾಮಾಬಾದ್ ಮತ್ತು ಪಕ್ಕದ ರಾವಲ್ಪಿಂಡಿ ನಗರಗಳಲ್ಲಿ ಮೊಬೈಲ್ ಫೋನ್ ಸೇವೆಗಳನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ.
ಪಾಕಿಸ್ತಾನದ ರಾಷ್ಟ್ರೀಯ ದಿನವನ್ನು ಬುಧವಾರ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾಕಿಸ್ತಾನದ ಸಶಸ್ತ್ರ ಪಡೆಗಳು ಬೃಹತ್ ಪಥಸಂಚಲನ ನಡೆಸಿಕೊಡಲಿವೆ. ಇದೇ ಸಂದರ್ಭದಲ್ಲಿ ಪ್ರಮುಖ ಶಸ್ತ್ರಾಸ್ತ್ರಗಳ ಪ್ರದರ್ಶನವೂ ನಡೆಯಲಿದೆ. ಸಂಪ್ರದಾಯದಂತೆ, ಪಥಸಂಚಲನಕ್ಕೆ ಪೂರ್ವಭಾವಿಯಾಗಿ ಪೂರ್ಣ ಪ್ರಮಾಣದ ತಾಲೀಮು ನಡೆಯುತ್ತಿದೆ. ಬುಧವಾರವೂ ಮೊಬೈಲ್ ಫೋನ್ ಸೇವೆಗಳನ್ನು ಬೆಳಗ್ಗಿನಿಂದ ಮಧ್ಯಾಹ್ನದವರಗೆ ಸ್ಥಗಿತಗೊಳಿಸಲಾಗುವುದು.