ಸಣ್ಣ ಉಳಿತಾಯ ಬಡ್ಡಿ ಕಡಿತ: ಕರುಣಾ ವಿರೋಧ
ಚೆನ್ನೈ, ಮಾ.21: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಕಡಿತವನ್ನು ಪ್ರಬಲವಾಗಿ ವಿರೋಧಿಸಿರುವ ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ, ಈ ನಿರ್ಧಾರವು ಜನರು ಹಾಗೂ ದೇಶದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದಿದ್ದಾರೆ.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಇಳಿಸುವ ಮೂಲಕ, ಬಡವರು ಹಾಗೂ ಮಧ್ಯಮ ವರ್ಗದವರು ಇಂತಹ ಯೋಜನೆಗಳಲ್ಲಿ ಹಣ ಹೂಡುವ ಆಸಕ್ತಿ ಕಳೆದುಕೊಳ್ಳುತ್ತಾರೆ. ಅದು ಕೇವಲ ಜನರಿಗೆ ಮಾತ್ರ ನಷ್ಟವಲ್ಲ. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿರುವ ನಮ್ಮ ದೇಶಕ್ಕೂ ನಷ್ಟವೆಂದು ಅವರು ಅಭಿಪ್ರಾಯಿಸಿದ್ದಾರೆ.
ಇದೇ ವೇಳೆ, ಕುವೈತ್‌ನಿಂದ 10 ಮಂದಿ ತಮಿಳುನಾಡಿನ ಬೆಸ್ತರನ್ನು ಭಾರತಕ್ಕೆ ಮರಳಿ ತರಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರುಣಾನಿಧಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.
ಅವರು ಕಳೆದ ವರ್ಷ ಗುತ್ತಿಗೆ ಮೀನುಗಾರಿಕೆಗಾಗಿ ಅಲ್ಲಿಗೆ ಹೋಗಿದ್ದರು. ನೈವೇಲಿ ಲಿಗ್ನೈಟ್ ಕಾರ್ಪೊರೇಶನ್‌ನ ಹೆಸರನ್ನು ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್ ಎಂದು ಬದಲಾಯಿಸಲು ಪ್ರಯತ್ನಿಸದಂತೆಯೂ ಕರುಣಾನಿಧಿ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.