×
Ad

ಔಷಧ ನಿಷೇಧ: ದಿಲ್ಲಿ ಹೈನಿಂದ ತಾತ್ಕಾಲಿಕ ತಡೆ

Update: 2016-03-21 23:58 IST

ಹೊಸದಿಲ್ಲಿ, ಮಾ.21: ನೂರಾರು ಔಷಧಗಳ ಮೇಲೆ ಸರಕಾರ ಹೇರಿದ್ದ ನಿಷೇಧ ಜಾರಿಯನ್ನು ಸೋಮವಾರ ದಿಲ್ಲಿ ಹೈಕೋರ್ಟ್ ತಡೆ ಹಿಡಿದಿದೆ. ಔಷಧ ಉತ್ಪಾದಕರು ನಿಷೇಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವರೆಗೆ ಅದು ತಡೆಯಾಜ್ಞೆ ನೀಡಿದೆಯೆಂದು ಕೆಲವು ಔಷಧ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿರುವ ವಕೀಲರೊಬ್ಬರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯು ಈ ತಿಂಗಳು 344 ನಿಗದಿತ ಡೋಸ್ ಸಂಯುಕ್ತ ಔಷಧಗಳಿಗೆ ನಿಷೇಧ ವಿಧಿಸಿದೆ. ಅವುಗಳನ್ನು ಉಪಯೋಗಿಸುವುದಕ್ಕೆ ಯಾವುದೇ ವೈದ್ಯಕೀಯ ಸಮರ್ಥನೆಯಿಲ್ಲವೆಂಬ ತಜ್ಞರ ವಾದದ ಆಧಾರದಲ್ಲಿ ಈ ನಿಷೇಧ ವಿಧಿಸಲಾಗಿದೆ.

ಅಬ್ಬೊಟ್ ಲ್ಯಾಬೊರೇಟರೀಸ್ ಹಾಗೂ ಫಿಜರ್ ಇಂಕ್‌ಗಳ ಭಾರತೀಯ ಘಟಕಗಳು, ಸಿಪ್ಲಾ, ಮಕ್ಲಿಡ್ ಫಾರ್ಮಾಸ್ಯುಟಿಕಲ್ಸ್ ಸಹಿತ ದೇಶೀಯ ಔಷಧ ಉತ್ಪಾದಕ ಸಂಸ್ಥೆಗಳು ನಿಷೇಧ ತೆರವುಗೊಳಿಸುವ ಪ್ರಯತ್ನದಲ್ಲಿ ದಿಲ್ಲಿ ಹೈಕೋರ್ಟ್‌ನ ಮೆಟ್ಟಲೇರಿದ್ದವು.
ಸೋಮವಾರ, ನ್ಯಾಯಮೂರ್ತಿ ರಾಜೀವ ಸಹಾಯ್, ವಕೀಲರು ಹಾಗೂ ಸಂಸ್ಥೆಗಳ ಅಧಿಕಾರಿಗಳಿಂದ ಕಿಕ್ಕಿರಿದಿದ್ದ ನ್ಯಾಯಾಲಯ ಕೊಠಡಿಯಿಂದ ವಿಚಾರಣೆಯನ್ನು ತನ್ನ ಚೇಂಬರ್‌ಗೆ ವರ್ಗಾಯಿಸಿದರು. ಮುಂದಿನ ವಿಚಾರಣೆಯನ್ನು ಅವರು ಮಾ.28ಕ್ಕೆ ನಿಗದಿಗೊಳಿಸಿದರೆಂದು ಸಿಪ್ಲಾ ಪರ ವಕೀಲೆ ಅರ್ಚನಾ ಸಚ್‌ದೇವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News