ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್ ರಾಜೀನಾಮೆ
ಮುಂಬೈ, ಮಾ.22: ಪ್ರತ್ಯೇಕ ಮರಾಠಾವಾಡ ರಾಜ್ಯದ ಕುರಿತು ತಾನು ನೀಡಿದ್ದ ಹೇಳಿಕೆಯು ವಿವಾದವಾಗಿರುವ ನಡುವೆಯೇ ಮಹಾರಾಷ್ಟ್ರದ ಅಡ್ವೊಕೆಟ್ ಜನರಲ್ ಶ್ರೀಹರಿ ಅನೇಯ ಇಂದು ರಾಜೀನಾಮೆ ನೀಡಿದ್ದಾರೆ.
ಇಂದು ಮುಂಜಾನೆ ರಾಜಭವನಕ್ಕೆ ತೆರಳಿದ ಅವರು, ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಅವರಿಗೆ ತನ್ನ ರಾಜೀನಾಮೆಯನ್ನು ಹಸ್ತಾಂತರಿಸಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀಹರಿ ಅನೇಯ ರಾಜ್ಯಪಾಲರಿಗೆ ತನ್ನ ರಾಜೀನಾಮೆ ಸಲ್ಲಿಸಿದ್ದಾರೆ. ಅದನ್ನು ಅಂಗೀಕರಿಸುವುದು ಅಥವಾ ಬಿಡುವುದು ಅವರ ಅಧಿಕಾರಕ್ಕೆ ಸೇರಿದುದಾಗಿದೆಯೆಂದು ರಾಜ್ಯಪಾಲರ ಕಚೇರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಈ ವಿಷಯವಾಗಿ ರಾಜ್ಯದ ವಿಧಾನಸಭೆಯಲ್ಲಿ ಹೇಳಿಕೆಯೊಂದನ್ನು ನೀಡುವ ನಿರೀಕ್ಷೆಯಿದೆ.
ರಾಜೀನಾಮೆ ನೀಡುವಂತೆ ಫಡ್ನವೀಸ್, ಅಡ್ವೊಕೆಟ್ ಜನರಲ್ ಅನೇಯರಿಗೆ ಸೂಚಿಸಿದ್ದರೆಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.
ಮರಾಠಾವಾಡ ಪ್ರದೇಶಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕೆನ್ನುವ ಮೂಲಕ ಅನೇಯ, ವಿವಾದವೊಂದನ್ನು ಹುಟ್ಟು ಹಾಕಿದ ಬಳಿಕ ಈ ಬೆಳವಣಿಗೆ ನಡೆದಿದೆ. ಪ್ರತ್ಯೇಕ ವಿದರ್ಭ ರಾಜ್ಯಕ್ಕೆ ಜನಮತ ಗಣನೆ ನಡೆಸಬೇಕೆಂದು ಕರೆ ನೀಡುವ ಮೂಲಕ ಅವರು ಈ ಹಿಂದೆಯೂ ವಿವಾದವೊಂದನ್ನು ಎಬ್ಬಿಸಿದ್ದರು.
ಅನೇಯ ನಿನ್ನೆ ಸಂಜೆ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರು. ಆ ವೇಳೆ ಅವರಿಗೆ ರಾಜೀನಾಮೆ ನೀಡುವಂತೆ ಫಡ್ನವೀಸ್ ಸೂಚಿಸಿದ್ದರು.
ಬಿಜೆಪಿಯ ಮಿತ್ರಪಕ್ಷ ಶಿವಸೇನೆಯೂ ವಿಧಾನಮಂಡಲದ ಉಭಯ ಸದನಗಳಲ್ಲೂ ಅಡ್ವೊಕೆಟ್ ಜನರಲ್ ವಿರುದ್ಧ ಬಿರುಸಿನ ಪ್ರತಿಭಟನೆಯಲ್ಲಿ ಕೈಜೋಡಿಸಿದ ಕಾರಣ ಮುಖ್ಯಮಂತ್ರಿಗೆ ಬೇರೆ ಆಯ್ಕೆಯಿರಲಿಲ್ಲವೆಂದು ಹಿರಿಯ ಸಚಿವರು ಹೇಳಿದ್ದಾರೆ.
ಮರಾಠಾವಾಡದ ಜಾಲ್ನಾ ಜಿಲ್ಲೆಯಲ್ಲಿ ರವಿವಾರ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಅನೇಯ, ಮರಾಠಾವಾಡಕ್ಕೆ ವಿದರ್ಭಕ್ಕಿಂತಲೂ ಹೆಚ್ಚು ಅನ್ಯಾಯವಾಗಿದೆ. ಆದುದರಿಂದ ಅದು ಸ್ವತಂತ್ರವಾಗಬೇಕು. ಅದಕ್ಕಾಗಿ ದಿಲ್ಲಿಯ ಮಟ್ಟದಲ್ಲಿ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕಾಗಿ ಒತ್ತಡ ಹೇರಬೇಕು ಎಂದಿದ್ದರು.
ಈ ಹಿನ್ನೆಲೆಯಲ್ಲಿ ವಿಪಕ್ಷಗಳು ಹಾಗೂ ಶಿವಸೇನೆ ಅಡ್ವೊಕೆಟ್ ಜನರಲ್‌ರ ವಜಾ ಬಯಸಿ ವಿಧಾನಸಭೆಯಲ್ಲಿ ಪ್ರತ್ಯೇಕ ಗೊತ್ತುವಳಿಗಳನ್ನು ಮಂಡಿಸಿದ್ದವು. ಅವರನ್ನು ವಜಾಗೊಳಿಸುವ ವರೆಗೆ ತಾನು ಸಂಪುಟ ಸಭೆಗಳಲ್ಲಿ ಭಾಗವಹಿಸುವುದಿಲ್ಲವೆಂದು ಶಿವಸೇನೆ ಹೇಳಿತ್ತು.