ಕೇರಳದಲ್ಲಿ ಎಡರಂಗ ನಾಯಕರಿಂದ ಮಿಸ್ಡ್ ಕಾಲ್ ಅಭಿಯಾನ
ತಿರುವನಂತಪುರ,ಮಾ.22: ಮತದಾರರನ್ನು...ವಿಶೇಷವಾಗಿ ಯುವಜನರನ್ನು ತಲುಪಲು ಕೇರಳದಲ್ಲಿ ಎಡರಂಗ ನಾಯಕರು ಮಿಸ್ಡ್ ಕಾಲ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ.
ಮೇ.16ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಅಭ್ಯರ್ಥಿಗಳನ್ನು ಬೆಂಬಲಿಸಲು ಹಿರಿಯ ಮಾರ್ಕ್ಸ್‌ವಾದಿ ಮುಖಂಡ ಹಾಗೂ ಪ್ರತಿಪಕ್ಷ ನಾಯಕ ವಿ.ಎಸ್.ಅಚ್ಯುತಾನಂದನ್ ಮತ್ತು ಪಕ್ಷದ ಪಾಲಿಟ್ ಬ್ಯೂರೊ ಸದಸ್ಯ ಪಿಣರಾಯಿ ವಿಜಯನ್ ಅವರು ಈ ನೂತನ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಅಭಿಯಾನವು ತಮ್ಮ ಮತಗಳನ್ನು ಎಲ್‌ಡಿಎಫ್ ಅಭ್ಯರ್ಥಿಗಳ ಪರವಾಗಿ ಚಲಾಯಿಸುವಂತೆ ಮತದಾರರನ್ನು ಕೋರಿಕೊಳ್ಳುವ ಜೊತೆಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಐದು ವರ್ಷಗಳ ಆಡಳಿತದಲ್ಲಿಯ ಭ್ರಷ್ಟಾಚಾರಗಳನ್ನೂ ಬಯಲಿಗೆಳೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿದವು.
ಈ ಅಭಿಯಾನದಡಿ ಯಾರೇ ಆದರೂ ನಿಗದಿತ ಮೊಬೈಲ್ ನಂಬರ್‌ಗೆ ತಮ್ಮ ಫೋನ್‌ನಿಂದ ಮಿಸ್ಡ್ ಕಾಲ್ ನೀಡಿದರೆ ಮರುಕರೆಯಲ್ಲಿ ಅಚ್ಯುತಾನಂದನ್ ಮತ್ತು ವಿಜಯನ್ ಅವರ ಮುದ್ರಿತ ಸಂದೇಶ ಅವರನ್ನು ತಲುಪುತ್ತದೆ.