×
Ad

ಪೋಷಕರೇ ಎಚ್ಚರ: ಆರ್.ಟಿ.ಇ ಹೆಸರಿನಲ್ಲಿ ಹಣ ಮಾಡುವವರಿದ್ದಾರೆ!

Update: 2016-03-23 08:55 IST

ಪ್ರತಿ ವರ್ಷವೂ ಜನರ ಅಭಿವೃದ್ಧಿಯನ್ನು ಉದ್ದೇಶವಾಗಿಟ್ಟುಕೊಂಡು ಸರಕಾರಗಳು ವಿವಿಧ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಲೇ ಇದೆ. ಆದರೆ ಸರಿಯಾದ ಮಾಹಿತಿ ಜನರಿಗೆ ಸಿಗದ ಕಾರಣ ಹಾಗೂ ಕೆಲವು ಅಧಿಕಾರಿ ವರ್ಗದ ನಿರ್ಲಕ್ಷ್ಯದಿಂದ ಯೋಜನೆಗಳು ಯೋಜನೆಗಳಾಗಿಯೇ ಫೈಲುಗಳಲ್ಲಿ ಬಾಕಿಯಾಗುತ್ತದೆ.

ಸರಕಾರದ ಯೋಜನೆಗಳು ಎಷ್ಟರಮಟ್ಟಿಗೆ ಫಲಕಾರಿಯಾಗಿದೆಯೋ ಇಲ್ಲವೋ ಬೇರೆ ವಿಚಾರ. ಆದರೆ ಜನರ ನಡುವೆ ಇದ್ದುಕೊಂಡು ಸರಕಾರದ ಯೋಜನೆಗಳ ಫಲಾನುಭವಿಯನ್ನಾಗಿ ಮಾಡಿಸುವ ಆಸೆ ಹುಟ್ಟಿಸಿ ಜನರಿಂದ ಕಮಿಷನ್ ನೆಪದಲ್ಲಿ ಹಣ ಮಾಡುವ ಮಂದಿಯೂ ಇದ್ದಾರೆ ಅನ್ನೋದು ಮಾತ್ರ ಕಟು ವಾಸ್ತವ.

ಇದು ನಮ್ಮ ಸಂಸ್ಥೆಯ ಅನುಭವಕ್ಕೆ ಬಂದದ್ದು ಆರ್.ಟಿ.ಇ (ಕಡ್ಡಾಯ ಶಿಕ್ಷಣ ಹಕ್ಕು) ಯೋಜನೆಯ ಮೂಲಕ.
ಮಾ.22ರಂದು ಆನ್ ಲೈನ್ ಮೂಲಕ ಆರ್.ಟಿ.ಇ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಮಧ್ಯಾಹ್ನ ಸರಿ ಸುಮಾರು 12 ಗಂಟೆ ಕಳೆದಿರಬಹುದು. ನಮ್ಮ ಸಂಸ್ಥೆಯ ಮುಖಾಂತರ ಉಚಿತ ಆನ್ ಲೈನ್ ಸೇವೆ ಮತ್ತು ಮಾಹಿತಿ ನೀಡುತ್ತಿದುದರಿಂದ ಕೆಲವೊಂದು ಪೋಷಕರು ತಮ್ಮ ಮಕ್ಕಳ ಅರ್ಜಿ ತುಂಬಲು ಕಾಯುತ್ತಿದ್ದರು.

ಆನ್ ಲೈನ್ ಇದ್ದುದರಿಂದ ಒಂದು ಅರ್ಜಿ ಸಲ್ಲಿಸಲು ಕನಿಷ್ಟ 15 ನಿಮಿಷ ಬೇಕು. ಬಂದಿದ್ದ ಪೋಷಕರ ಪೈಕಿ ಕೊನೆಯವರ ಅರ್ಜಿ ತುಂಬಿಸಿದ ಕೂಡಲೇ ಕಚೇರಿಗೆ ಬಂದ ಮಹಿಳೆಯೋರ್ವರು, ಅವರ ಕೈಯಲ್ಲಿ  3 ಅರ್ಜಿಗಳನ್ನು ತಂದಿದ್ದರು. ಈ ಮೊದಲು ಒಂದೆರಡು ಸಲ ಮಾಹಿತಿ ಪಡೆದು ಎರಡು ಅವಳಿ-ಜವಳಿ ಮಕ್ಕಳ ಅರ್ಜಿಯೊಂದಿಗೆ ಬಂದಿದ್ದ ಮಹಿಳೆ, ಪರಿಚಿತರಂತೆ ವರ್ತಿಸಿ ''ನಮ್ಮ ಕುಟುಂಬದ ಸದಸ್ಯರ 3 ವಿದ್ಯಾರ್ಥಿಗಳ ಅರ್ಜಿಗಳು ಇದೆ ಮಾಡಿಕೊಡಬಹುದೇ'' ಎಂದಾಗ 3 ಅರ್ಜಿಗಳ ಪೈಕಿ ಒಂದನ್ನು ಆನ್ ಲೈನ್ ನಲ್ಲಿ ಭರ್ತಿ ಮಾಡುತ್ತಿದ್ದೆ. ಇದೇ ಸಂದರ್ಭದಲ್ಲಿ ಕಚೇರಿಗೆ ಕಾಲಿಟ್ಟ ಬೇರೆ ಮಹಿಳೆಯೋರ್ವರು ಆರ್.ಟಿ.ಇ ಬಗ್ಗೆ ವಿಚಾರಿಸಿದಾಗ ಬೇಕಾದ ದಾಖಲೆ ಸೇರಿದಂತೆ ವಿವಿಧ ಮಾಹಿತಿಗಳನ್ನೂ ನೀಡಿದೆ. ಕೊನೆಗೆ ಆ ಮಹಿಳೆ ``ಇದು ಸರಕಾರದಿಂದ ನೀಡುವ ಉಚಿತವಾದ ಸೀಟಲ್ಲವೇ? ಎಂದು ಪ್ರಶ್ನಿಸಿದರು. ಹೌದು, ಆದರೆ ಫಲಾನುಭವಿಯಾಗಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಎಂದು ಉತ್ತರಿಸಿದೆ. "ಹೌದೇ..ಆದರೆ ನನಗೆ ಸಿಕ್ಕ ಮಾಹಿತಿ ಪ್ರಕಾರ ಮಂಗಳೂರಿನ ಆಸುಪಾಸಿನಲ್ಲಿ ಮಹಿಳೆಯೋರ್ವಳು ಪೋಷಕರ ಬಳಿ ತೆರಳಿ, ನಿಮ್ಮ ಮಕ್ಕಳನ್ನು 1 ನೇ ತರಗತಿಗೆ ಸೇರಿಸಿ, 10 ನೇ ತರಗತಿಯವರೆಗೆ ಯಾವುದೇ ಫೀಸು ಪಡೆಯದೆ ಉತ್ತಮ ಖಾಸಗಿ ಶಾಲೆಗಳಲ್ಲಿ ಸೀಟು ಮಾಡಿಸಿಕೊಡ್ತೀನಿ. ಸೀಟು ಸಿಕ್ಕರೆ ನನಗೆ 10 ಸಾವಿರ ಕೈಗೂಲಿ ಕೊಟ್ಟರೆ ಸಾಕು ಎಂದು ಹೇಳಿ ಕೆಲಸ ಮಾಡುತ್ತಿದ್ದಾರೆ. ನಿಮಗೆ ಈ ಬಗ್ಗೆ ಮಾಹಿತಿ ಇದೆಯಾ'' ಎಂದು ಪ್ರಶ್ನಿಸಿದಾಗ ನಾನು ದಂಗಾಗಿಬಿಟ್ಟೆ.

ಮಹಿಳೆ ನೀಡಿದ ವಿವರದ ಬಳಿಕ, ಸ್ಥಳೀಯ ಪರಿಸರದ ಬಗ್ಗೆಯೂ ತಿಳಿಸಿದರು. ಅವರು ತಿಳಿಸಿದ ಪರಿಸರದ ಜನರಿಗೆ ಫೋನಾಯಿಸಿದಾಗ ಮಹಿಳೆಯ ಪರಿಚಯ ಸಿಕ್ಕಿತು. ಸುಮಾರು 2 ಗಂಟೆಗಳ ಸತತ ವಿಚಾರಣೆಯ ಬಳಿಕ ಕಚೇರಿಗೆ ಮೂರು ಮಕ್ಕಳ ಅರ್ಜಿಯೊಂದಿಗೆ ಬಂದಿದ್ದ ಮಹಿಳೆಯೇ ಆಗಿದ್ದರು ಎಂಬುವುದು ತಿಳಿಯಿತು.

ನಮ್ಮ ಉಚಿತ ಸೇವೆಯನ್ನು ಬಳಸಿಕೊಂಡು ಪೋಷಕರನ್ನು ನಂಬಿಸಿ, ಕೇವಲ 10 ಸಾವಿರ ಅಂದರೆ ವರುಷಕ್ಕೆ 1 ಸಾವಿರದ ನೆಪ ಹೇಳಿ 10 ನೇ ತರಗತಿಯವರೆಗೆ ಉನ್ನತ ಖಾಸಗಿ ಶಾಲೆಗಳಲ್ಲಿ ಸೀಟು ಸಿಕ್ಕರೆ ಲಾಭವಲ್ಲವೇ ಎಂದು ಮೈಂಡ್ ವಾಶ್ ಮಾಡಿಸಿ, ಹಣ ಮಾಡುವ ಮಂದಿ ಇದ್ದಾರೆ ಎಂಬುವುದನ್ನು ಸಾರ್ವಜನಿಕರೆಲ್ಲರೂ ತಿಳಿಯಬೇಕಿದೆ.

ಮೊದಲೇ ಹಣ ಫಿಕ್ಸ್ ಮಾಡಿಟ್ಟಿದ್ದ ಮಹಿಳೆ, ಸೀಟು ಸಿಕ್ಕರೆ 10 ಸಾವಿರ ರೂ.ಯನ್ನು ತನಗೆ ನೀಡುವಂತೆ ತಿಳಿಸಿರುವುದಾಗ ತಿಳಿಯಿತು. 10 ಸಾವಿರ ಓರ್ವ ವಿದ್ಯಾರ್ಥಿಯಿಂದ ಪಡೆದರೆ 10 ವಿದ್ಯಾರ್ಥಿಗಳಾಗುವಾಗ 1 ಲಕ್ಷ....!!! ಬಡ, ಮಧ್ಯಮ ವರ್ಗದ ಜನರಿಗೆ ಇದಕ್ಕಿಂತ ದೊಡ್ಡ ಪಂಗನಾಮ ಬೇರೆ ಇದೆಯೇ? ಯೋಚಿಸಬೇಕಿದೆ ಪೋಷಕರು.


ಕೊನೆಯ ದಿನ ಇದು ನಮ್ಮ ಸಂಸ್ಥೆಯವರಿಗೆ ಆದ ನೇರ ಅನುಭವ. ಈ ಜಾಲವು ರಾಜ್ಯದ ವಿವಿಧೆಡೆಯೂ ಸಕ್ರಿಯವಾಗಿರುವ ಬಗ್ಗೆಯೂ ಅಲ್ಲಗಳೆಯುವಂತಿಲ್ಲ. ಆರ್.ಟಿ.ಇ ಕಾಯಿದೆ ಬಗ್ಗೆ ಸರಿಯಾಗಿ ತಿಳಿದುಕೊಂಡಿರದ ಪೋಷಕರು, ಇಂತಹ ಹಣ ಮಾಡುವ ದಂಧೆಯವರ ಬಲೆಗೆ ಬೇಗನೆ ಸಿಲುಕುತ್ತಿರುವುದು ಮಾತ್ರ ನಿಜಕ್ಕೂ ಬೇಸರ. ಆದ್ದರಿಂದ ಆರ್.ಟಿ.ಇ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಪ್ರತಿಯೋರ್ವ ಪೋಷಕರು, ಸಾರ್ವಜನಿಕರ ಜವಾಬ್ದಾರಿಯಾಗಿದೆ.

ಇಂತಹ ದಂಧೆಗಳಿಗೆ ಒಂದು ರೀತಿಯಲ್ಲಿ ಪೋಷಕರೇ ಕಾರಣ. ಏಕೆಂದರೆ ಆರ್.ಟಿ.ಇ ಬಗ್ಗೆ 15 ನಿಮಿಷ ತಿಳಿದುಕೊಳ್ಳುವ ವ್ಯವಧಾನವಾಗಲೀ, ಸಮಯವಾಗಲೀ ಇಲ್ಲ. ಪೋಷಕರು ನೀಡದ ಸಮಯವನ್ನು ಇಂತಹ ಹಣದಂಧೆಕೋರರು ತಮ್ಮ ಸಮಯ ಬಳಸಿ, ಸಮಯ ಸಾಧಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕೆಲವು ಸಂಘ ಸಂಸ್ಥೆಗಳು ನೀಡುವ ಉಚಿತ ಸೇವೆಯನ್ನು ಈ ರೀತಿ ದುರುಪಯೋಗ ಪಡಿಸುತ್ತಿರುವ ಹಣ ದಂಧೆಕೋರರ ಬಗ್ಗೆ ಮುಂದಿನ ದಿನಗಳಲ್ಲಿ ಸೇವಾ ಸಂಸ್ಥೆ ಅಥವಾ ಸಂಘ-ಸಂಸ್ಥೆಗಳು(ಎನ್.ಜಿ.ಓ) 1ಕ್ಕಿಂತ ಹೆಚ್ಚು ಆರ್.ಟಿ.ಇ ಅಥವಾ ಇತರ ಅರ್ಜಿ ತರುವವರ ಬಗ್ಗೆ ಎಚ್ಚರದಿಂದ ಇರಬೇಕಾದ ಅನಿವಾರ್ಯತೆಯೂ ಇದೆ. ಸರಿಯಾಗಿ ವಿಚಾರಣೆ ಮಾಡಿದ ಬಳಿಕವಷ್ಟೇ ಅರ್ಜಿಗಳನ್ನು ತುಂಬಿಸಬೇಕು. ಇಲ್ಲದಿದ್ದರೆ ನಮಗೆ ತಿಳಿಯದೆಯೇ ಆ ವಂಚನಾ ಜಾಲದಲ್ಲಿ ನಾವು ಕೂಡ ಪರೋಕ್ಷವಾಗಿ ಸೇರಿದಂತಾಗಬಹುದು. ಯಾವುದೇ ಸಾರ್ವಜನಿಕರಿಂದ 1 ರೂಪಾಯಿಯನ್ನೂ ಪಡೆಯದೆ ನಮ್ಮ ಉಚಿತ ಸೇವೆ ಇನ್ನೊಬ್ಬರ ಹಣದ ದಂಧೆಯಾಗುವುದು ನಿಜಕ್ಕೂ ಖೇದನೀಯ.

 
ಏನಿದು ಆರ್.ಟಿ.ಇ (ಕಡ್ಡಾಯ ಶಿಕ್ಷಣ ಹಕ್ಕು) ಕಾಯಿದೆ?


ಎಪ್ರಿಲ್ 1, 2010 ರಿಂದ ದೇಶದೆಲ್ಲೆಡೆ ಜಾರಿಗೆ ಬಂದಿರುವ ಈ ಕಾಯ್ದೆಯು ಶಿಕ್ಷಣಕ್ಕೆ ಸಂಬಂಧಿಸಿ ಕಳೆದ ಕೆಲವು ವರುಷಗಳಿಂದ ಪ್ರಚಲಿತದಲ್ಲಿರುವ ಪ್ರಮುಖ ಯೋಜನೆಯಾಗಿದೆ.

ಈ ಯೋಜನೆಯ ಮೂಲಕ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಲಾಗುತ್ತಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಪ್ರಮಾಣ ಪತ್ರ ಪಡೆದ ಸಂಸ್ಥೆಗಳನ್ನು ಹೊರತುಪಡಿಸಿ, ಬೇರೆಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಯೋಜನೆಗೆ ಒಳಪಡುತ್ತದೆ. ಶೇ.25 ರಷ್ಟು ಸೀಟನ್ನು ಇದಕ್ಕೆ ಒಳಪಡುವ ಸಂಸ್ಥೆಗಳು ಅರ್ಹ ಬಡ ಹಾಗೂ ಮೀಸಲಿಟ್ಟವರಿಗೆ ಈ ಸೀಟನ್ನು ಕಾಯ್ದಿರಿಸುತ್ತದೆ.

ಎಲ್.ಕೆ. ಜಿಗೆ ಪ್ರವೇಶ ಪಡೆದರೆ, 8ನೇ ತರಗತಿಯವರೆಗೆ ಅಥವಾ 1 ನೇ ತರಗತಿಗೆ  ಪ್ರವೇಶ ಪಡೆದಲ್ಲಿ ಯಾವುದೇ ಫೀಸು ಕಟ್ಟದೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ 10ನೇ ತರಗತಿ ವರೆಗೆ ಉಚಿತ ಶಿಕ್ಷಣ  ನೀಡಲಾಗುತ್ತದೆ . 6 ರಿಂದ 14 ವರ್ಷದೊಳಗಿನ ಅರ್ಹ ಬಡ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯಬೇಕೆಂಬುದೇ ಈ ಕಾಯ್ದೆಯ ಮೂಲ ಉದ್ದೇಶವಾಗಿದೆ.


2016 ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಈ ಯೋಜನೆಯ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಲು ಮಾ.15 ಕೊನೆಯ ದಿನಾಂಕವಾಗಿತ್ತು. ಬಳಿಕ ಕೆಲ ಸಮಸ್ಯೆಗಳಿಂದಾಗಿ ಪೋಷಕರ ಒತ್ತಾಯದ ಮೇರೆ 22 ರವರೆಗೆ ವಿಸ್ತರಿಸಲಾಗಿತ್ತು.

ಜಾತಿ ಮತ್ತು ಆದಾಯ ಪ್ರಮಾಣಪತ್ರ, ಜನನ ಪ್ರಮಾಣ ಪತ್ರ, ವಿಳಾಸದ ಬಗ್ಗೆ ಸರಿಯಾದ ಮಾಹಿತಿ ಇರುವ ಆಧಾರ್ ಕಾರ್ಡ್ / ಚುನಾವಣಾ ಗುರುತಿನ ಚೀಟಿ, ವಿದ್ಯಾರ್ಥಿಯ 1 ಭಾವಚಿತ್ರದೊಂದಿಗೆ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟಿನಲ್ಲಿ ಪ್ರತಿ ವರ್ಷವೂ ಅರ್ಜಿ ಕರೆಯಲಾಗುತ್ತದೆ. ಈ ಯೋಜನೆಯ ಮೂಲಕ ನಮ್ಮ 5 ಕಿ.ಮೀ ಸುತ್ತಮುತ್ತಲಿನಲ್ಲಿರುವ 5 ಶಾಲೆಗಳಿಗೆ ಒಂದೇ ಅರ್ಜಿಯ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.

ಆದ್ದರಿಂದ ಆರ್.ಟಿ.ಇ ಬಗ್ಗೆ ಸರಿಯಾಗಿ ತಿಳಿದುಕೊಂಡು ಮುನ್ನಡೆಯಬೇಕಾದುದು ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಕರ್ತವ್ಯ ನಾವು ಮಾಡದಿದ್ದಲ್ಲಿ ಆರ್.ಟಿ.ಇ ಮೂಲಕ ಹಣ ಮಾಡುವವರ ದಂಧೆಗೆ ಯಾವುದೇ ತೊಡಕುಗಳಿರುವುದಿಲ್ಲ ಎಂದರೆ ಅತಿಶಯೋಕ್ತಿಯಾಗದು.


ಆರ್.ಟಿ. ಇ ಬಗ್ಗೆ ಉಚಿತ ಸೇವೆಯನ್ನು ನಮ್ಮ ಸಂಸ್ಥೆಯು ಕಳೆದ ಹಲವು ವರುಷಗಳಿಂದ ನೀಡುತ್ತಿದೆ. ಈ ಬಗ್ಗೆ ಮಾಹಿತಿಯನ್ನು ಪಡೆಯಲು ಮತ್ತು ಮುಂಬರುವ ದಿನಗಳಲ್ಲಿಯೂ ಉಚಿತ ಸೇವೆಯನ್ನು ಪಡೆಯಲು ನಮ್ಮ ಕಚೇರಿಗೆ ಮುಖತಃ ಕೂಡ ಭೇಟಿ ನೀಡಬಹುದು. ನಮ್ಮ ವಿಳಾಸ: ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಬಂದರ್, ಮಂಗಳೂರು.
ಮಾಹಿತಿಗೆ ಈ ಮೊಬೈಲ್ ನಂಬರನ್ನು ಸಂಪರ್ಕಿಸಬಹುದು. 9844963059, 7676413059

Writer - ಇರ್ಷಾದ್ ವೇಣೂರ್

contributor

Editor - ಇರ್ಷಾದ್ ವೇಣೂರ್

contributor

Similar News