ಕೆಲಸ ಹುಡುಕಿ-ಮಾಜಿ ಗಂಡನನ್ನು ಅವಲಂಬಿಸಬೇಡಿ
ಹೊಸದಿಲ್ಲಿ, ಮಾ.23: ನಗರ ನ್ಯಾಯಾಲಯವೊಂದು ಮಹಿಳೆಯೊಬ್ಬಳಿಗೆ ಕೆಲಸವೊಂದನ್ನು ಹುಡುಕಿಕೊಳ್ಳುವಂತೆ ಆದೇಶ ನೀಡಿದೆ. ಮಹಿಳೆ ವಿದ್ಯಾವಂತಳಾಗಿದ್ದು, ಸಮರ್ಥಳಿದ್ದಾಳೆ. ಆಕೆ, ಪರಿತ್ಯಕ್ತ (ವಿಚ್ಛೇದಿತ) ಪತಿಯ ಮೇಲೆ ಆರ್ಥಿಕ ಹೊರೆಯನ್ನು ಹೇರ ಬಾರದೆಂದು ಅದು ಹೇಳಿದೆ. ನ್ಯಾಯಾಲಯದ ಈ ಸಲಹೆಯು ಭಾರತದ ಆಶನಾರ್ಥ ವ್ಯವಸ್ಥೆಯ ಕುರಿತು ಚರ್ಚೆಯೊಂದಕ್ಕೆ ಚಾಲನೆ ನೀಡುವ ಸಾಧ್ಯತೆಯಿದೆ.
ಪತಿಯು ಮಹಿಳೆಗೆ ಕೆಲಸ ಹುಡುಕಲು ಸಹಾಯ ಮಾಡವುದಕ್ಕೆ ಹಾಗೂ ಒಂದು ವರ್ಷ ಅಶನಾರ್ಥ ಪಾವತಿಸುವುದಕ್ಕೆ ಒಪ್ಪಿಕೊಂಡಿದ್ದಾನೆ.
ವಿಚ್ಚೇದಿತ ಪತ್ನಿಗೆ ತಿಂಗಳಿಗೆ ರೂ.12 ಸಾವಿರ ಅಶನಾರ್ಥ ಪಾವತಿಸುವುದರ ವಿರುದ್ಧ ವ್ಯಕ್ತಿಯೊಬ್ಬನು ಸಲ್ಲಿಸ್ದಿ ಮೇಲ್ಮನವಿಯ ವಿಚಾರಣೆಯ ವೇಳೆ ನ್ಯಾಯಾಲಯ ಮಹಿಳೆಗೆ ಈ ಸಲಹೆ ನೀಡಿದೆ.
ಪ್ರತಿವಾದಿಯು (ಮಹಿಳೆ) ಅರ್ಜಿದಾರನಿಗಿಂತಲೂ (ಗಂಡ) ಹೆಚ್ಚು ವಿದ್ಯಾರ್ಹತೆ ಉಳ್ಳವಳೆಂದು ಒಪ್ಪಿಕೊಂಡಿದ್ದಾಳೆ. ತಾನು ದೈಹಿಕವಾಗಿ ಸಮರ್ಥೆ ಹಾಗೂ ಗಳಿಸುವ ಸಾಮರ್ಥ್ಯವಿದೆಯೆಂದೂ ಒಪ್ಪಿಕೊಂಡಿದ್ದಾಳೆ. ಹೀಗಿರುವಾಗ, ಅರ್ಜಿದಾರನಿಗೆ ಆರ್ಥಿಕ ಹೊರೆಯಾಗಿ ಅವಳನ್ನು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಬಿಡುವಂತಿಲ್ಲ. ಅವಳು ಕೆಲಸ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಜಿಲ್ಲಾ ನ್ಯಾಯಾಧೀಶೆ ರೇಖಾ ರಾಣಿ ಹೇಳಿದ್ದಾರೆ.
ಭಾರತದ ಕಾನೂನು ವ್ಯವಸ್ಥೆಯ ಅನುಸಾರ, ಬೇರ್ಪಡುವಿಕೆ ಅಥವಾ ವಿಚ್ಛೇದನ ಪ್ರಕರಣಗಳಿಗೆ ಮಹಿಳೆಯೊಬ್ಬಳು ಆರ್ಥಿಕ ಬೆಂಬಲದ ರೂಪದಲ್ಲಿ ಜೀವನಾಂಶ ಪಡೆಯಲು ಅರ್ಹಳಾಗುತ್ತಾಳೆ.
ಕೆಲಸ ಹುಡುಕಲು ಮಹಿಳೆಗೆ ಅರ್ಜಿದಾರನ ಸಹಾಯ ಬೇಕಿದ್ದಲ್ಲಿ ಅವಳು ಆತನನ್ನು (ವಿಚ್ಛೇದಿತ ಪತಿಯನ್ನು) ಮೊಬೈಲ್ ಅಥವಾ ಇ-ಮೇಲ್ ಸಂದೇಶಗಳ ಮೂಲಕ ಸಂಪರ್ಕಿಸಬಹುದೆಂದು ನ್ಯಾಯಾಲಯ ತಿಳಿಸಿದೆ.
ತಾನು ಉತ್ತಮ ವಿದ್ಯಾರ್ಹತೆಯುಳ್ಳವಳಾದರೂ, ಸಣ್ಣ ಪ್ರಾಯದಲ್ಲೇ ತನ್ನ ವಿವಾಹವಾಗಿದೆ. ಅಲ್ಲದೆ, ತಾನೆಂದೂ ಒಬ್ಬಳೇ ಪ್ರಯಾಣ ಮಾಡಿದವಳೂ ಅಲ್ಲವೆಂದು ಮಹಿಳೆ ವಾದಿಸಿದ್ದಳು.
ಆದಾಗ್ಯೂ, ತನ್ನ ವಿಚ್ಛೇದಿತ ಪತ್ನಿ ತನ್ನಿಂದ ಹೆಚ್ಚು ವಿದ್ಯಾರ್ಹತೆಯುಳ್ಳವಳಾಗಿರುವುದರಿಂದ ತಾನು ಆಕೆಗೆ ಧನ ಪರಿಹಾರ ಕೊಡಲು ಬಾಧ್ಯಸ್ಥನಲ್ಲ. ಅವಳೊಬ್ಬಳು ಎಂಎಸ್ಸಿಯಲ್ಲಿ ಚಿನ್ನದ ಪದಕ ವಿಜೇತಳಾಗಿದ್ದಾಳೆ. ಆಕೆ ಈ ವರೆಗೆ ಎಲ್ಲೂ ಕೆಲಸಕ್ಕೆ ಅರ್ಜಿ ಸಲ್ಲಿಸಿಲ್ಲ. ಸೋಮಾರಿಯಾಗಿ ಕುಳಿತು ತನಗೆ ಆರ್ಥಿಕ ಹೊರೆಯಾಗ ಬಯಸಿದ್ದಾಳೆಂದು ಆಕೆಯ ಗಂಡ ಪ್ರತಿವಾದ ಮಂಡಿಸಿದ್ದನು.
ತಾನೊಬ್ಬಳೇ ಈವರೆಗೆ ಎಲ್ಲಿಗೂ ಪ್ರಯಾಣಿಸಿಲ್ಲ. ಆದುದರಿಂದ ಕೆಲಸ ಹುಡುಕಲು ಗಂಡ ಜೊತೆಯಲ್ಲಿ ಬರಬೇಕೆಂಬ ಮಹಿಳೆಯ ವಾದಕ್ಕೆ, ಈ ಹೇಳಿಕೆ ರುಚಿಯಿಲ್ಲದುದು ಹಾಗೂ ಜೀರ್ಣಿಸಲಾಗದುದೆಂದು ನ್ಯಾಯಲಯ ಪ್ರತಿಕ್ರಿಯಿಸಿತು.
ಇಬ್ಬರೂ ಪ್ರತ್ಯೇಕವಾಗಿ ನ್ಯಾಯಾಲಯಕ್ಕೆ ಬರುತ್ತಿದ್ದೀರಿ. ಮೊಕದ್ದಮೆ ಹೋರಾಡಲು ಒಬ್ಬಳಿಗೆ ನ್ಯಾಯಾಲಯಕ್ಕೆ ಬರಲು ಸಾಧ್ಯವಾಗುವಾಗ, ಕೆಲಸ ಹುಡುಕಲಿಕ್ಕೀ ಒಬ್ಬಳಿಗೆ ಹೋಗಲು ಸಾಧ್ಯವಾಗಬಹುದೆಂದು ಅದು ಅಭಿಪ್ರಾಯಿಸಿತು.