×
Ad

2 ಆತ್ಮಹತ್ಯಾ ಬಾಂಬರ್‌ಗಳ ಗುರುತು ಪತ್ತೆ

Update: 2016-03-23 23:46 IST
ಇಬ್ಬರು ಶಂಕಿತ ಆತ್ಮಹತ್ಯಾ ಬಾಂಬರ್‌ಗಳು ಮತ್ತು ಭಯೋತ್ಪಾದನಾ ದಾಳಿಯ ಶಂಕಿತ ರೂವಾರಿ ಮಂಗಳವಾರ ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ ಚೀಲಗಳನ್ನು ಹೊತ್ತ ಟ್ರಾಲಿಗಳನ್ನು ತಳ್ಳಿಕೊಂಡು ಹೋಗುತ್ತಿರುವುದು. ಇದು ಸಿಸಿಟಿವಿಯಲ್ಲಿ ದಾಖಲಾದ ಚಿತ್ರ.

ಬ್ರಸೆಲ್ಸ್, ಮಾ. 23: ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನ ಹೃದಯ ಭಾಗದಲ್ಲಿ ಮಂಗಳವಾರ ನಡೆದ ಸ್ಫೋಟಗಳ ಪ್ರಧಾನ ಸೂತ್ರಧಾರಿ ಮತ್ತು ಇಬ್ಬರು ಶಂಕಿತ ಆತ್ಮಹತ್ಯಾ ಬಾಂಬರ್‌ಗಳನ್ನು ಬೆಲ್ಜಿಯಂ ಪೊಲೀಸರು ಗುರುತಿಸಿದ್ದಾರೆ.
ಈ ಶಂಕಿತರು ಕಳೆದ ವರ್ಷದ ನವೆಂಬರ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದಿದ್ದ ಐಸಿಸ್ ಉಗ್ರರೊಂದಿಗೆ ನೇರ ನಂಟು ಹೊಂದಿದ್ದಾರೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಮೂವರು ಶಂಕಿತರು ಬ್ಯಾಗ್‌ಗಳನ್ನು ಹೊಂದಿದ ಟ್ರಾಲಿಗಳನ್ನು ದೂಡಿಕೊಂಡು ಬರುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ಚಿತ್ರ ಇಬ್ಬರು ಬಾಂಬರ್‌ಗಳು ಮತ್ತು ಸೂತ್ರಧಾರಿ ನಝೀಂ ಲಾಚ್ರೋಯಿ (25) ಅವರದ್ದಾಗಿದೆ ಎನ್ನಲಾಗಿದೆ. ಬಾಂಬರ್‌ಗಳು ತಮ್ಮನ್ನು ತಾವು ಸ್ಫೋಟಿಸಿಕೊಳ್ಳುವ ಮೊದಲು ನಝೀಂ ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ಹೊರಗೋಡಿ ಹೋಗಿದ್ದನು.
 ಈ ಮೊದಲು, ಬ್ರಸೆಲ್ಸ್‌ನ ಉಪನಗರ ಆ್ಯಂಡರ್‌ಲೆಕ್ಟ್‌ನಲ್ಲಿ ನಜೀಂನನ್ನು ಸೆರೆಹಿಡಿಯಲಾಗಿದೆ ಎಂಬುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಬಂಧಿತ ನಜೀಂ ಅಲ್ಲ ಎಂಬುದಾಗಿ ಅವುಗಳು ಬಳಿಕ ಹೇಳಿದವು.
ಸ್ಫೋಟಗಳಿಗೆ ಕೊಂಚವೇ ಮುನ್ನ ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ ಟ್ರಾಲಿಗಳಲ್ಲಿ ಚೀಲಗಳನ್ನು ದೂಡಿಕೊಂಡು ಹೋಗುತ್ತಿದ್ದ ಶಂಕಿತರ ಪೈಕಿ ಓರ್ವನನ್ನು ಬ್ರಾಹೀಂ ಅಲ್ ಬಕ್ರೋಯಿ ಎಂಬುದಾಗಿ ಗುರುತಿಸಲಾಗಿದೆ. ಆತನ ಸಹೋದರ ಖಾಲಿದ್ ಅಲ್ ಬಕ್ರೋಯಿ ಬಳಿಕ ಮೆಟ್ರೊ ನಿಲ್ದಾಣದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡನು.
ಸಶಸ್ತ್ರ ದರೋಡೆಗಳಲ್ಲಿ ಈ ಇಬ್ಬರು ಶಾಮೀಲಾಗಿದ್ದುದು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಆದರೆ, ಅವರು ಐಸಿಸ್ ಜೊತೆಗೆ ನಂಟು ಹೊಂದಿರುವ ವಿಚಾರ ಬೆಳಕಿಗೆ ಬಂದಿರಲಿಲ್ಲ.
 ಪ್ಯಾರಿಸ್ ದಾಳಿಗಳಿಗೆ ಸಂಬಂಧಿಸಿ ನಝೀಂ ಪೊಲೀಸರಿಗೆ ಬೇಕಾಗಿದ್ದನು.
    

ಸಾವಿನ ಸಂಖ್ಯೆ ಏರುವ ಭೀತಿ

ಬ್ರಸೆಲ್ಸ್ ಮೇಲೆ ಮಂಗಳವಾರ ನಡೆದ ಸರಣಿ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೇರಿದೆ ಹಾಗೂ ಸುಮಾರು 260 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವೆ ಮ್ಯಾಗಿ ಡಿ. ಬ್ಲಾಕ್ ಹೇಳಿದ್ದಾರೆ.
ಮೇಲ್‌ಬೀಕ್ ಮೆಟ್ರೊ ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ ಕೆಲವರ ಶರೀರಗಳು ಛಿದ್ರ ಛಿದ್ರವಾಗಿದ್ದು, ಅವರನ್ನು ಗುರುತಿಸಲು ಕಷ್ಟವಾಗುತ್ತಿದೆ. ಹಾಗಾಗಿ, ಮೃತರ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆಯಿದೆ ಎಂದು ಸ್ಥಳೀಯ ಟಿವಿ ಚಾನೆಲ್‌ನೊಂದಿಗೆ ಮಾತನಾಡಿದ ಸಚಿವೆ ತಿಳಿಸಿದರು.

ಒಬಾಮ ಖಂಡನೆ

 ಹವಾನ, ಮಾ. 23: ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ಮೇಲೆ ಭಯೋತ್ಪಾದಕ ದಾಳಿ ನಡೆದಿರುವ ಹಿನ್ನೆಲೆಯಲ್ಲಿ, ಐಸಿಸ್ ವಿರುದ್ಧದ ದಾಳಿಯನ್ನು ಅಮೆರಿಕ ನೇತೃತ್ವದ ಮಿತ್ರಪಡೆ ಮುಂದುವರಿಸುವುದು ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮಂಗಳವಾರ ಹೇಳಿದ್ದಾರೆ. ಕ್ಯೂಬಾ ರಾಜಧಾನಿ ಹವಾನದಲ್ಲಿ ನಡೆದ ಬೇಸ್‌ಬಾಲ್ ಪಂದ್ಯವೊಂದನ್ನು ವೀಕ್ಷಿಸುವ ನಡುವೆಯೇ, ಇಎಸ್‌ಪಿಎನ್ ಟೆಲಿವಿಷನ್ ಚಾನೆಲ್‌ನೊಂದಿಗೆ ಅವರು ಮಾತನಾಡುತ್ತಿದ್ದರು.


ಹೇಯ: ಬಾನ್ ಕಿ ಮೂನ್

ವಿಶ್ವಸಂಸ್ಥೆ, ಮಾ. 23: ಬ್ರಸೆಲ್ಸ್‌ನಲ್ಲಿ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ವಿಶ್ವಸಂಸ್ಥೆಯ ಮುಖ್ಯಸ್ಥ ಬಾನ್ ಕಿ ಮೂನ್ ಖಂಡಿಸಿದ್ದಾರೆ. ಈ ದಾಳಿಗಳನ್ನು ‘‘ಹೇಯ’’ ಎಂಬುದಾಗಿ ಬಣ್ಣಿಸಿದ ಅವರು, ಇದಕ್ಕೆ ಕಾರಣರಾದವರು ಕಾನೂನಿನ ವಿಚಾರಣೆ ಎದುರಿಸಬೇಕು ಎಂದು ಆಗ್ರಹಿಸಿದ್ದಾರೆ. ‘‘ಬೆಲ್ಜಿಯಂನ ಹೃದಯ ಭಾಗ ಹಾಗೂ ಐರೋಪ್ಯ ಒಕ್ಕೂಟದ ಕೇಂದ್ರದ ಮೇಲೆ ಹೇಯ ದಾಳಿ ನಡೆದಿದೆ’’ ಎಂದು ಬಾನ್‌ರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News