ಯೋಜನೆಗಳಿಗೆ ಸ್ಪೀಕರ್ ಸಹಿಗಾಗಿ ಝಾಂಬಿಯಾಕ್ಕೆ ಧಾವಿಸಿದ ಅಧಿಕಾರಿ
ಹೊಸದಿಲ್ಲಿ, ಮಾ.23: ಸರಕಾರವು ಮಾ.31ರೊಳಗೆ ಒಂದು ಲಕ್ಷ ಕೋ.ರೂ. ಹೆಚ್ಚುವರಿ ಹಣಕಾಸು ಬಾಧ್ಯತೆಗಳನ್ನು ಈಡೇರಿಸಲು ಸಾಧ್ಯವಾಗುವಂತೆ ವೆಚ್ಚ ದಾಖಲೆಗಳಿಗೆ ಸ್ಪೀಕರ್ ಸುಮಿತ್ರಾ ಮಹಾಜನ ಅವರ ಸಹಿಯನ್ನು ಪಡೆದುಕೊಳ್ಳಲು ಲೋಕಸಭಾ ಸಚಿವಾಲಯವು ಮಂಗಳವಾರ ಅಧಿಕಾರಿಯೋರ್ವರನ್ನು ಝಾಂಬಿಯಾಕ್ಕೆ ರವಾನಿಸಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾರ್ಯಕ್ರಮಕ್ಕಾಗಿ 15,000 ಕೋ.ರೂ.,ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಗಾಗಿ 5,000 ಕೋ.ರೂ.ಮತ್ತು ಮಿಲಿಟರಿ ಹಾರ್ಡ್‌ವೇರ್‌ಗಾಗಿ 2,000 ಕೋ.ರೂ. ಈ ವೆಚ್ಚಗಳಲ್ಲಿ ಸೇರಿವೆ. ಹೆಚ್ಚುವರಿ ಮುಂಗಡಪತ್ರ ಪ್ರಸ್ತಾವನೆಗಳು ಅಥವಾ ಮೂರನೆ ಪೂರಕ ಅನುದಾನಗಳ ಬೇಡಿಕೆಗೆ ಸಂಸತ್ತಿನ ಉಭಯ ಸದನಗಳು ಮಾ.16ರಂದೇ ಅಸ್ತು ಎಂದಿದ್ದರೂ ಕಾನೂನು ಸಚಿವಾಲಯವು ಕಡತವನ್ನು ವಿಳಂಬಗೊಳಿಸಿದ್ದರಿಂದ ಅದರ ಮೇಲೆ ಸ್ಪೀಕರ್ ಸಹಿಯನ್ನು ಪಡೆದುಕೊಳ್ಳಲು ಲೋಕಸಭಾ ಸಚಿವಾಲಯಕ್ಕೆ ಸಾಧ್ಯವಾಗಿರಲಿಲ್ಲ.
ಕಡತವು ಕಾನೂನು ಸಚಿವಾಲಯದಿಂದ ಬಂದಾಗ ಸ್ಪೀಕರ್ ಅಂತರ ಸಂಸದೀಯ ಒಕ್ಕೂಟ ಸಮಾವೇಶದಲ್ಲಿ ಪಾಲ್ಗೊಳ್ಳಲು ಝಾಂಬಿಯಾದ ಲುಸಾಕಾಕ್ಕೆ ತೆರಳಿದ್ದು, ಅವರು ಮಾ.25ರಂದು ಸ್ವದೇಶಕ್ಕೆ ಮರಳಲಿದ್ದಾರೆ. ಸಮಯವನ್ನು ಉಳಿಸುವ ದೃಷ್ಟಿಯಿಂದ ಲೋಕಸಭೆಯ ಹೆಚ್ಚುವರಿ ಕಾರ್ಯದರ್ಶಿಯೋರ್ವರು ಸ್ಪೀಕರ್ ಸಹಿ ಪಡೆಯಲು ಲುಸಾಕಾಕ್ಕೆ ಹಾರಿದ್ದಾರೆ.
ಸ್ಪೀಕರ್ ಸಹಿ ಇಲ್ಲದೆ ಶಾಸಕಾಂಗ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕಡತವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಒಪ್ಪಿಗೆಗೆ ಕಳುಹಿಸಲು ಸಾಧ್ಯವಿಲ್ಲ.