×
Ad

ಎಡಪಕ್ಷಗಳ ಪ್ರಚಾರದಲ್ಲಿ ಕನ್ಹಯ್ಯನಿಗೆ ಪಾತ್ರವಿಲ್ಲ!

Update: 2016-03-23 23:49 IST

ಹೊಸದಿಲ್ಲಿ, ಮಾ.23: ಪಶ್ಚಿಮಬಂಗಾಳ ಹಾಗೂ ಕೇರಳ ವಿಧಾನಸಭೆಗಳ ಮುಂದಿನ ಚುನಾವಣೆಗಳಲ್ಲಿ, ಎಡಪಕ್ಷಗಳು ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾಕುಮಾರ್‌ನನ್ನು ಪ್ರಚಾರಕ್ಕೆ ಇಳಿಸುವ ಸಾಧ್ಯತೆಯಿಲ್ಲವೆನ್ನಲಾಗಿದೆ.

ಜೆಎನ್‌ಯುನಲ್ಲಿ ಭಾವನಾತ್ಮಕತೆಯಿಂದ ನಡೆದ ಕ್ಯಾಂಪಸ್ ರಾಜಕೀಯಕ್ಕಿಂತ ವಾಸ್ತವ ಚುನಾವಣಾ ರಾಜಕೀಯ ಪ್ರತ್ಯೇಕವೆಂಬ ವೌಲ್ಯಮಾಪನದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಆದಾಗ್ಯೂ, ಸಿಪಿಐ ಸಂಯೋಜಿತ ಎಐಎಸ್‌ಎಫ್‌ನ ವಿದ್ಯಾರ್ಥಿ ಕಾರ್ಯಕರ್ತನಾಗಿರುವ ಕನ್ಹಯ್ಯಾ, ಎಐಎಸ್‌ಎಫ್ ಹಾಗೂ ಇತರ ಎಡ ಪಂಥೀಯ ವಿದ್ಯಾರ್ಥಿ ಘಟಕಗಳು ಸಂಘಟಿಸುವ ಕೆಲವು ವಿದ್ಯಾರ್ಥಿ ಸಮ್ಮೇಳನಗಳಲ್ಲಿ ಭಾಗವಹಿಸಲು ಕೇರಳ ಹಾಗೂ ಬಂಗಾಳಗಳಿಗೆ ಶೀಘ್ರವೇ ಕೆಲವು ಪ್ರವಾಸಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.
ಆತ ಬಂಗಾಳದ ಜಾಧವಪುರ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಸಭೆಯೊಂದರಲ್ಲಿ ಭಾಗವಹಿಸಬಹುದು. ಕನ್ಹಯ್ಯಾನನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಿದ ಬಳಿಕ ಎದ್ದಿದ್ದ ರಾಜಕೀಯ ಬಿರುಗಾಳಿಯ ವೇಳೆ, ಆತ ಕೇರಳ ಹಾಗೂ ಬಂಗಾಳಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾನೆಂದು ಸಿಪಿಎಂ ನಾಯಕ ಸೀತಾರಾಮ ಯೆಚೂರಿ ಹೇಳಿದ್ದರು.
ಆದಾಗ್ಯೂ, ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಕೆಲವು ಸಭೆಗಳಲ್ಲಿ ಭಾಗವಹಿಸಲು ಕನ್ಹಯ್ಯಾ ಎರಡೂ ರಾಜ್ಯಗಳಲ್ಲಿ ಪ್ರವಾಸ ಮಾಡಲಿದ್ದಾರೆಂದು ಎಡಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಕುತೂಹಲದ ಸಂಗತಿಯೆಂದರೆ, ಅಸ್ಸಾಂನಲ್ಲಿ ಕಾಂಗ್ರೆಸ್, ಕನ್ಹಯ್ಯೆ ಹಾಗೂ ಹೈದರಾಬಾದ್ ವಿವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರ ಭಾವ ಚಿತ್ರಗಳಿರುವ ಪ್ರಚಾರ ಭಿತ್ತಿಪತ್ರಗಳನ್ನು ಈಗಾಗಲೇ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News