×
Ad

ಉತ್ತರಾಖಂಡ್: ಕಾಂಗ್ರೆಸ್ ಶಾಸಕರ ಪಕ್ಷಾಂತರಕ್ಕೆ ರಾಮ್‌ದೇವ್ ಕುಮ್ಮಕ್ಕು

Update: 2016-03-23 23:53 IST

ಡೆಹ್ರಾಡೂನ್, ಮಾ.23: ರಾಜ್ಯದಲ್ಲಿ ಭುಗಿಲೆದ್ದಿರುವ ರಾಜಕೀಯ ಬಿಕ್ಕಟ್ಟಿನ ಹಿಂದೆ ಯೋಗಗುರು ರಾಮದೇವ್ ಅವರ ಕೈವಾಡವಿದೆಯೆಂದು ಕಾಂಗ್ರೆಸ್ ಪಕ್ಷದ ಉತ್ತರಾಖಂಡ ಘಟಕವು ಸೋಮವಾರ ಆಪಾದಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಪಕ್ಷಾಂತರಕ್ಕೆ ರಾಮದೇವ್ ಕುಮ್ಮಕ್ಕು ನೀಡುತ್ತಿದ್ದಾರೆಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಿಶೋರ್ ಉಪಾಧ್ಯಾಯ್ ದೂರಿದ್ದಾರೆ.

ಉತ್ತರಾಖಂಡ್‌ನಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಬಂಡೆದ್ದಿರುವ ಭಿನ್ನಮತೀಯ ಕಾಂಗ್ರೆಸ್ ಶಾಸಕರು ಪ್ರತಿಪಕ್ಷ ಬಿಜೆಪಿ ಜೊತೆ ಕೈಜೋಡಿಸಿ ಸರಕಾರದ ಪತನಕ್ಕೆ ಯತ್ನಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರ ಪುತ್ರ ಸಾಕೇತ್ ಬಹುಗುಣ ಹಾಗೂ ಪಕ್ಷದ ಜಂಟಿ ಕಾರ್ಯದರ್ಶಿ ಅನಿಲ್ ಗುಪ್ತಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ 6 ವರ್ಷಗಳ ಅವಧಿಗೆ ಉಚ್ಚಾಟಿಸಿದ ಬಳಿಕ ಪಕ್ಷದಲ್ಲಿ ಬಂಡಾಯ ಭುಗಿಲೆದ್ದಿದೆ.

ಇನ್ನೂ ಐವರು ಕಾಂಗ್ರೆಸ್-ಪಿಡಿಎಫ್ ಶಾಸಕರ ಬೆಂಬಲ ಉತ್ತರಾಖಂಡ ಬಿಜೆಪಿ

ಡೆಹ್ರಾಡೂನ್, ಮಾ.23: ಮಾ.28ರಂದು ಉತ್ತರಾಖಂಡ ವಿಧಾನಸಭೆಯಲ್ಲಿ ಸತ್ವಪರೀಕ್ಷೆ ಎದುರಿಸಲಿರುವ ಹರೀಶ ರಾವತ್ ಸರಕಾರದ ಭವಿಷ್ಯದ ಕುರಿತು ಹೊಗೆಯಾಡುತ್ತಿರುವ ಅನಿಶ್ಚಿತತೆಯ ನಡುವೆಯೇ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಇನ್ನೂ ಕನಿಷ್ಠ ಐವರು ಶಾಸಕರು ತನ್ನ ಪಾಳಯವನ್ನು ಸೇರಲು ಸಿದ್ಧರಾಗಿದ್ದಾರೆ ಎಂದು ಬಿಜೆಪಿಯು ಬುಧವಾರ ಹೇಳಿದೆ. ಈ ಪೈಕಿ ಕೆಲವು ಸಚಿವರೂ ಇದ್ದು, ನಮ್ಮ ಪಾಳಯಕ್ಕೆ ಸೇರಲು ಸೂಕ್ತ ಸಮಯಕ್ಕಾಗಿ ಕಾಯುತ್ತಿ ದ್ದಾರೆ ಎಂದು ಪ್ರದೇಶ ಬಿಜೆಪಿಯ ಮುಖ್ಯ ವಕ್ತಾರ ಮುನ್ನಾ ಸಿಂಗ್ ಚೌಹಾಣ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಅವರು ನಮ್ಮ ಸಂಪರ್ಕದಲ್ಲಿದ್ದಾರೆ ಮತ್ತು ಮಾ.28ರಂದು ರಾಜ್ಯ ವಿಧಾನಸಭೆಯಲ್ಲಿ ಲೆಕ್ಕಾಚಾರ ಸಮಬಲದತ್ತ ವಾಲಿದರೆ ಅವರು ನಮ್ಮಾಂದಿಗೆ ಕೈಜೋಡಿಸಲಿದ್ದಾರೆ ಎಂದರು. ಈ ಶಾಸಕರ ಹೆಸರುಗಳನ್ನು ಬಹಿರಂಗಗೊಳಿಸಲು ನಿರಾಕರಿಸಿದ ಅವರು, ಈ ಪೈಕಿ ಕಾಂಗ್ರೆಸ್ ಮತ್ತು ಅದರ ಆಡಳಿತ ಪಾಲುದಾರ ಪಿಡಿಎಫ್‌ನ ಸದಸ್ಯರು ಇದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News