ಆತ್ಮಹತ್ಯೆ-ಕೊಲೆಪಾತಕ ಥಿಯೆರಿ ಕೈಬಿಟ್ಟ ಪೊಲೀಸರು: ಕಲಾಭವನ್ ಮಣಿಯದ್ದು ಸಹಜ ಸಾವು!
ತೃಶೂರ್, ಮಾರ್ಚ್24: ಕಲಾಭವನ್ ಮಣಿಯ ಮರಣವು ಆತ್ಮಹತ್ಯೆಯೋ ಕೊಲೆಯೋ ಎಂಬ ಮಾಧ್ಯಮಗಳ ಚರ್ಚೆ ಕೊನೆಗೂ ಪೊಲೀಸ್ ತನಿಖೆಯ ಮೂಲಕ ಕೊನೆಗೊಳ್ಳುತ್ತಿದೆ ಎಂದು ವರದಿಯಾಗಿದೆ. ಮಣಿ ಸಾವಿನಕುರಿತು ಮಣಿ ಸಹಾಯಕರ ವಿರುದ್ಧ ಅವರ ಮನೆಯವರು ಶಂಕೆ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮಣಿಯ ಮರಣದ ಕುರಿತು ವ್ಯಾಪಕ ತನಿಖೆಗೆ ಸಿದ್ಧರಾಗಿದ್ದರು. ಈ ತನ್ಮಧ್ಯೆ ಮಣಿಯ ದೇಹದಲ್ಲಿ ಕೀಟನಾಶಕದ ಪ್ರಮಾಣ ಇದೆ ಎಂಬ ಲ್ಯಾಬರೇಟರಿ ಮಾಹಿತಿಯೂ ಹೊರಬಂದಿತ್ತು. ಅಲ್ಲದೆ ಮಣಿಯ ಆರ್ಥಿಕ ವ್ಯವಹಾರಗಳ ಕುರಿತು ತನಿಖೆ ನಡೆಯಿತು. ಅಂತಿಮವಾಗಿ ಮರಣಿಯ ಸಾವು ಅಸಹಜವಲ್ಲ ಕರುಳಿನ ರೋಗದ ಕಾರಣದಿಂದ ಹಾಗೂ ಮಿತಿಮೀರಿ ಮದ್ಯಪಾನ ನಡೆಸಿರುವುದು ಸಾವಿಗೆ ಕಾರಣವೆಂದು ಪೊಲೀಸರು ತನಿಖೆಯ ಮೂಲಕ ನಿರ್ಧಾರಕ್ಕೆ ಬಂದಿದ್ದಾರೆ. ಕರುಳಿಗೆ ತಗಲಿದ್ದ ರೋಗ ಉಲ್ಬಣಿಸಿದ್ದರಿಂದ ಮಣಿಯವರು ಸಾವನ್ನಪ್ಪಿದ್ದು ಆದ್ದರಿಂದ ಮಣಿಯವರದ್ದು ಸಹಜ ಮರಣವಾಗಿದೆಯೆಂದು ತನಿಖೆಯ ಮೂಲಕ ಪೊಲೀಸರು ಸಾವಿನ ಕಾರಣವನ್ನು ಗುರುತಿಸಿರುವರೆಂದು ವರದಿಯಾಗಿದೆ.
ಮಣಿಯ ನಿಕಟವರ್ತಿಗಳು ಹಾಗೂ ಬಂಧುಗಳ ಸಹಿತ ಸುಮಾರು ಇನ್ನೂರಕ್ಕೂ ಅಧಿಕ ಮಂದಿಯನ್ನು ಪ್ರಶ್ನಿಸಲಾದರೂ ಕೊಲೆಪಾತಕವೋ ಆತ್ಮಹತ್ಯೆಯದ್ದೋ ಸಾಧ್ಯತೆ ಇಲ್ಲವೆಂದು ಇವರೆಲ್ಲರೂ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿಯೂ ಪೊಲೀಸರು ಮಣಿ ಸಹಜ ಸಾವಿಗೀಡಾದರೆಂದು ನಿರ್ಧರಿಸಿದ್ದಾರೆನ್ನಲಾಗಿದೆ. ಗಂಭೀರ ಕರುಳು ರೋಗದಿಂದಾಗಿದೆ ಸಾವು ಸಂಭವಿಸಿದೆ ಎಂದು ಫೋರೆನ್ಸಿಕ್ ತಜ್ಞರು ಅಭಿಪ್ರಾಯ ಪ್ರಕಟಿಸಿರುವ ನಿಟ್ಟಿನಲ್ಲಿ ಪೊಲೀಸರು ಮಣಿ ಸಾವಿನ ಊಹಾಪೋಹಗಳಿಗೆ ತೆರೆಯೆಳೆಯಲು ನಿರ್ಧರಿಸಿದ್ದಾರೆ. ವೈಜ್ಞಾನಿಕ ನಿರೀಕ್ಷಣೆಯ ನಂತರವೇ ಪೊಲೀಸರು ಈ ನಿಟಿನಲ್ಲಿ ಅಂತಿಮ ವರದಿ ಸಿದ್ಧಪಡಿಸಲಿದ್ದಾರೆಂದು ಪತ್ರಿಕಾ ವರದಿಗಳು ತಿಳಿಸಿವೆ.
ಕೀಟನಾಶಕದಿಂದಾಗಿ ಮಣಿ ಸಾವಪ್ಪಿಲ್ಲ ಎಂಬ ಪರಾಮರ್ಶೆಗಳು ಲ್ಯಾಬ್ ರಿಪೋರ್ಟ್‌ನಲ್ಲಿದೆ ಎಂದೂ ಸೂಚನೆಗಳಿವೆ. ಆಂತರಿಕ ಅವಯವಗಳ ಪರೀಕ್ಷೆಯಲ್ಲಿ ಕ್ಲೋರ್‌ಪೈರಿಫೋಸ್ ಎಂಬ ಕೀಟನಾಶಕದಂಶ ಕಂಡು ಬಂದಿದ್ದರೂ ಇದು ದೊಡ್ಡ ಪ್ರಮಾಣದಲ್ಲಿಲ್ಲ. ಆಹಾರ ಸೇವನೆಯ ಕಾರಣದಿಂದ ಶರೀರಕ್ಕೆ ಸೇರಬಹುದಾದಷ್ಟು ಕಡಿಮೆ ಪ್ರಮಾಣದಲ್ಲಿತ್ತೆನ್ನಲಾಗುತ್ತಿದೆ. ಅತೀವ ಕರುಳು ರೋಗ ಮತ್ತು ಆಸ್ಪತ್ರೆಯಲ್ಲಾಗಿದ್ದ ಹೃದಯಾಘಾತ ಮಣಿಮರಣಕ್ಕೆ ಕಾರಣವೆಂದು ಪ್ರಥಮವಾಗಿ ನಿರ್ಧರಿಸಲಾಗಿತ್ತು. ಅದುವೇ ಸರಿಯಾಗಿದೆಯೆಂದು ಸಾಬೀತುಗೊಳ್ಳುವತ್ತ ತನಿಖೆ ಸಾಗಿದೆ. ಮಣಿಯನ್ನು ಆಸ್ಪತ್ರೆಗೆ ತಲುಪಿಸಿದಾಗ ಕರುಳಿನ ಕೆಲಸ ಹೆಚ್ಚುಕಮ್ಮಿ ಸ್ಥಗಿತದ ಸ್ಥಿತಿಯಿತ್ತೆನ್ನಲಾಗಿದೆ. ಮಣಿಗೆ ಗಂಭೀರ ಕರುಳು ರೋಗ ಇರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಕರುಳು ರೋಗಿಯಾದ್ದರಿಂದ ಮದ್ಯಪಾನ ನಿಲ್ಲಿಸಬೇಕೆಂದು ಮಣಿಗೆ ಸೂಚಿಸಲಾಗಿತ್ತು. ಆದರೆ ಅವರು ಮತ್ತೆ ಮಿತಿಮೀರಿ ಮದ್ಯಸೇವಿಸಿದ್ದಾರೆ. ಆದಕಾರಣ ಆಂತರಿಕ ಅವಯಗಳಲ್ಲಿ ರಕ್ತ ಸಂಚಲನೆಗೆ ತಕರಾರು ಸಂಭವಿಸಿತ್ತೆನ್ನಲಾಗಿದೆ. ಅಂತಿಮವಾಗಿ ಮಣಿಯ ಮರಣ ಅಸಹಜವಲ್ಲವೆಂದು ಪೊಲೀಸರು ನಿರ್ಧರಿಸಿರುವುದಾಗಿ ವರದಿಯಾಗಿದೆ.