8.7 ಕೋಟಿ ಮಕ್ಕಳ ಮೆದುಳಿಗೆ ಅಪಾಯ ತಂದಿದೆ ಜಾಗತಿಕ ಸಂಘರ್ಷದ ಪ್ರದೇಶಗಳು !
ವಾಷಿಂಗ್ಟನ್ : ವಿಶ್ವದಾದ್ಯಂತ ಸಂಘರ್ಷ ಸ್ಥಿತಿಯಿರುವ ಹಾಗೂ ಯುದ್ಧಪೀಡಿತ ಪ್ರದೇಶಗಳಲ್ಲಿನ ಏಳು ವರ್ಷಗಳ ಕೆಳಗಿನ ಸುಮಾರು 8.7 ಕೋಟಿ ಮಕ್ಕಳ ಮೆದುಳು ಅಪಾಯವೆದುರಿಸುತ್ತಿದ್ದು ಇದು ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ತಡೆಯಾಗಲಿದೆಯೆಂದು ವಿಶ್ವಸಂಸ್ಥೆಯ ಮಕ್ಕಳ ಘಟಕ ಯುನಿಸೆಫ್ ಹೇಳಿದೆ.
ಇಂತಹ ಸಂಘರ್ಷ ಸ್ಥಿತಿಯ ಪ್ರದೇಶಗಳ ಮಕ್ಕಳು ಕಲಿಕಾ ಸಮಸ್ಯೆಯನ್ನು ಎದುರಿಸಬಹುದಲ್ಲದೆಜೀವನ ಪರ್ಯಂತ ಹಲವಾರು ಇತರ ಸಮಸ್ಯೆಗಳನ್ನು ಎದುರಿಸುವ ಸಂಭವವೂ ಇದೆಯೆಂದು ಗುರುವಾರ ಬಿಡುಗಡೆಗೊಳಿಸಿದ ವರದಿಯೊಂದರಲ್ಲಿ ಯುನಿಸೆಫ್ ಹೇಳಿದೆ.
ಮೊದಲ ಏಳು ವರ್ಷಗಳಲ್ಲಿ ಮಕ್ಕಳ ಮೆದುಳಿನ ಬೆಳವಣಿಗೆ ಅವರು ತಾಯಿಯ ಮೊಲೆಹಾಲನ್ನು ಸೇವಿಸಿದ್ದಾರೆಯೇ ಅಥವಾ ಅವರು ಸುರಕ್ಷಿತ ವಾತಾವರಣದಲ್ಲಿ ಬೆಳೆಯುತ್ತಿದ್ದಾರೆಯೇ ಹಾಗೂ ಶಿಕ್ಷಣ ಸೌಲಭ್ಯಗಳು ಅವರಿಗಿವೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮೇಲಾಗಿ ಯುದ್ಧ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಕ್ಕಳು ಭಾವನಾತ್ಮಕ ಸಮಸ್ಯೆಗಳಿಂದಲೂ ಬಳಲುತ್ತಾರೆ ಎಂದುಯುನಿಸೆಫ್‌ನ ಆರ್ಲಿ ಚೈಲ್ಡ್ ಡೆವಲೆಪ್ಮೆಂಟ್ ಪ್ರೊಗ್ರಾಂ ಮುಖ್ಯಸ್ಥೆ ಪಿಯಾ ರೆಬೆಲ್ಲೋ ಬ್ರಿಟ್ಟೋ ತಿಳಿಸಿದ್ದಾರೆ.
‘‘ಸಂಘರ್ಷ ಸ್ಥಿತಿ ಮಕ್ಕಳನ್ನು ಅವರ ಕುಟುಂಬ ಸ್ನೇಹಿತರು, ಆಟ ಪಾಠ ಹಾಗೂ ದೈನಂದಿನ ಚಟುವಟಿಕೆಗಳಿಂದ ವಂಚಿತರನ್ನಾಗಿಸುತ್ತದೆ. ಇವುಗಳಿದ್ದಲ್ಲಿ ಮಾತ್ರ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಹಾಗೂ ಮುಂದೆ ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬಹುದು,’’ಎಂದು ಅವರು ಹೇಳಿದರು.
ಯುರೋಪ್ ದೇಶಗಳತ್ತ ತೆರಳುತ್ತಿರುವ ನಿರಾಶ್ರಿರಲ್ಲಿ ಹಲವರು ಸಮುದ್ರವನ್ನು ಅಪಾಯಕಾರಿಯಾಗಿ ದಾಟುತ್ತಿದ್ದು ಟರ್ಕಿಯಿಂದ ಗ್ರೀಸ್‌ನತ್ತ ಪ್ರಯಾಣಿಸುವ ನಿರಾಶ್ರಿತರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದಾರೆ,’’ ಎಂದು ಯುನಿಸೆಫ್ ತನ್ನ ಕಳೆದ ತಿಂಗಳ ವರದಿಯೊಂದರಲ್ಲಿ ತಿಳಿಸಿತ್ತು.
ಸಿರಿಯಾದಲ್ಲಿ ಹುಟ್ಟಿದ ಪ್ರತಿ ಮೂರು ಮಕ್ಕಳಲ್ಲಿ ಒಂದು ಮಗು ಸಂಘರ್ಷ ಸ್ಥಿತಿಯನ್ನು ಎದುರಿಸಬೇಕಾಗಿ ಬಂದಿದೆಯೆಂದೂ ಈ ವರದಿ ಹೇಳಿದೆ.