ಭಗತ್ ಸಿಂಗ್ ಗಲ್ಲಿಗೆ ಬ್ರಿಟನ್ ರಾಣಿ ಕ್ಷಮೆ ಕೋರಬೇಕು

Update: 2016-03-24 15:54 GMT

ಲಾಹೋರ್, ಮಾ. 24: ಅಪ್ರತಿಮ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿರುವುದಕ್ಕಾಗಿ ಬ್ರಿಟನ್ ರಾಣಿ ಎಲಿಝಬೆತ್ ಕ್ಷಮೆ ಕೋರಬೇಕು ಹಾಗೂ ಭಗತ್ ಸಿಂಗ್ ಕುಟುಂಬಿಕರಿಗೆ ಪರಿಹಾರ ನೀಡಬೇಕು ಎಂಬುದಾಗಿ ಪಾಕಿಸ್ತಾನದ ಮಾನವಹಕ್ಕುಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಅವರು ಭಗತ್ ಸಿಂಗ್‌ರ 85ನೆ ಪುಣ್ಯತಿಥಿ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಭಗತ್ ಸಿಂಗ್‌ರ ಪುಣ್ಯತಿಥಿ ಆಚರಣೆ ಕಾರ್ಯಕ್ರಮಗಳು ಪಾಕಿಸ್ತಾನದ ಪಂಜಾಬ್ ಪ್ರಾಂತದ ಎರಡು ಕಡೆಗಳಲ್ಲಿ ನಿನ್ನೆ ನಡೆದವು.

ಮೊದಲ ಕಾರ್ಯಕ್ರಮ ಲಾಹೋರ್‌ನಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಅವರ ಜನ್ಮಸ್ಥಳ, ಫೈಸಲಾಬಾದ್ ಜಿಲ್ಲೆಯ ಜರನ್‌ವಾಲ ಬಾಂಗ ಚಕ್‌ನ ಚಕ್ 105-ಜಿಬಿಯಲ್ಲಿ ನಡೆಯಿತು. ಸಮಾಜದ ವಿವಿಧ ವರ್ಗಗಳ ಜನರು ಸಮಾರಂಭದಲ್ಲಿ ಭಾಗವಹಿಸಿ ಬಲಿದಾನಗೈದ ಸ್ವಾತಂತ್ರ ವೀರನಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಎರಡನೆ ಕಾರ್ಯಕ್ರಮ ಇಲ್ಲಿನ ಶದ್ಮನ್ ಚೌಕ್‌ನಲ್ಲಿ ನಡೆಯಿತು. ಇದೇ ಸ್ಥಳದಲ್ಲಿ 1931 ಮಾರ್ಚ್ 23ರಂದು ಭಗತ್ ಸಿಂಗ್‌ರನ್ನು ಅವರ ಸಂಗಡಿಗರಾದ ರಾಜ್‌ಗುರು ಮತ್ತು ಸುಖ್‌ದೇವ್ ಜೊತೆಗೆ ಗಲ್ಲಿಗೇರಿಸಲಾಗಿತ್ತು.

ಅವರ ವಿರುದ್ಧ ಸರಕಾರದ ವಿರುದ್ಧ ಪಿತೂರಿ ನಡೆಸಿದ ಆರೋಪವನ್ನು ಹೊರಿಸಲಾಗಿತ್ತು.

ಸ್ವಾತಂತ್ರ ಚಳವಳಿಯ ಕಣ್ಮಣಿಯನ್ನು ಗಲ್ಲಿಗೇರಿಸಿದುದಕ್ಕಾಗಿ ಬ್ರಿಟಿಶ್ ರಾಣಿ ಕ್ಷಮೆ ಯಾಚಿಸಬೇಕು ಹಾಗೂ ಅವರ ಉತ್ತರಾಧಿಕಾರಿಗಳಿಗೆ ಮರಣ ಪರಿಹಾರ ಕೊಡಬೇಕು ಎಂಬ ನಿರ್ಣಯವನ್ನೂ ಈ ಸಂದರ್ಭದಲ್ಲಿ ಅಂಗೀಕರಿಸಲಾಯಿತು.

‘‘ನಾವು ಈ ನಿರ್ಣಯವನ್ನು ಇಸ್ಲಾಮಾಬಾದ್‌ನಲ್ಲಿರುವ ಬ್ರಿಟಿಶ್ ಹೈಕಮಿಶನರ್‌ಗೆ ಸಲ್ಲಿಸುತ್ತೇವೆ ಹಾಗೂ ಅದನ್ನು ರಾಣಿಗೆ ಕಳುಹಿಸುವಂತೆ ಕೋರುತ್ತೇವೆ’’ ಎಂದು ಮಾನವಹಕ್ಕುಗಳ ಕಾರ್ಯಕರ್ತ ಅಬ್ದುಲ್ಲಾ ಮಲಿಕ್ ಗುರುವಾರ ಪಿಟಿಐಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News