ತಿಂಗಳೊಳಗಾಗಿ ಸಾರ್ವಜನಿಕ ದೂರುಗಳನ್ನು ಪರಿಹರಿಸಿ ಉನ್ನತಾಧಿಕಾರಿಗಳಿಗೆ ಪ್ರಧಾನಿ ತಾಕೀತು
ಹೊಸದಿಲ್ಲಿ, ಮಾ.24: ಸೇವೆಗಳ ಕೊರತೆಯ ಕುರಿತು ಸಾರ್ವಜನಿಕರ ದೂರುಗಳನ್ನು ಪ್ರಾಮಾಣಿಕವಾಗಿ ಸರಿಪಡಿಸಿರುವ ಹಾಗೂ ಪರಿಹರಿಸಿರುವ ಬಗ್ಗೆ ಒಂದು ತಿಂಗಳೊಳಗಾಗಿ ಸಾಬೀತುಪಡಿಸುವಂತೆ ಉನ್ನತ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ತಾಕೀತು ಮಾಡಿದ್ದಾರೆ.
ದೂರು ದಾಖಲಾದ 60 ದಿನಗಳೊಳಗಾಗಿ ಎಲ್ಲ ಪ್ರಕರಣಗಳೂ ಮುಕ್ತಾಯಗೊಳ್ಳಬೇಕೆಂದು ಅವರು ಹೇಳಿದ್ದಾರೆ.
ಬುಧವಾರ, ವೀಡಿಯೊ ಕಾನ್ಫರೆನ್ಸ್‌ನ ಮೂಲಕ ಸಹಿತ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಅಧಿಕಾರಶಾಹಿಗೆ ತಾಕೀತು ಮಾಡಿದ್ದಾರೆ. ದೂರುಗಳನ್ನು ಸಂಗ್ರಹಿಸಿ, ಸರಕಾರಿ ಇಲಾಖೆಗಳ ಮೂಲಕ ಅವುಗಳ ಪ್ರಗತಿಯನ್ನು ಪರಿಶೀಲಿಸುವ ವೆಬ್ ಆಧರಿತ ವೇದಿಕೆ-‘ಪ್ರಗತಿ’ಯಲ್ಲಿ-ಮಾಡಲಾಗಿರುವ ಸಾಧನೆಯ ಪರಾಮರ್ಶೆಗಾಗಿ ಈ ಸಭೆ ಕರೆಯಲಾಗಿತ್ತು.
ಸರಕಾರಿ ಇಲಾಖೆಗಳ ಕುರಿತು ನೀಡಿರುವ ದೂರುಗಳನ್ನು ಪರಿಗಣಿಸಲು ಹಾಗೂ ಸಂಸ್ಕರಿಸಲು ವಿಳಂಬ ಮಾಡುವುದರಿಂದ ಸಾರ್ವಜನಿಕರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಕಂತೆ ಕಂತೆ ದೂರುಗಳನ್ನು ಪ್ರಧಾನಿ ಕಾರ್ಯಾಲಯವು ಅನೇಕ ಜಾಲತಾಣಗಳು ಹಾಗೂ ಆನ್‌ಲೈನ್ ವೇದಿಕೆಗಳ ಮೂಲಕ ಪಡೆಯುತ್ತಿದೆ.
ದೂರುಗಳ ಸಮರ್ಥ ನಿಭಾವಣೆಯ ತನ್ನ ‘ಕನಿಷ್ಠ ಸರಕಾರ, ಗರಿಷ್ಠ ಆಡಳಿತ’ವನ್ನು ಬಿಂಬಿಸುವ ಪ್ರಮುಖ ಅಂಶವಾಗಿದೆಯೆಂದು ಮೋದಿ ಒತ್ತಿ ಹೇಳಿದ್ದಾರೆ.
ಎಷ್ಟು ನಾಗರಿಕ-ಕೇಂದ್ರಿತ ಸೇವೆಗಳನ್ನು ವಿದ್ಯುನ್ಮಾನೀಯವಾಗಿ ನೀಡಲಾಗಿದೆಯೆಂದು ಪರಿಶೀಲಿಸಲು ದೇಶಾದ್ಯಂತ ಜಿಲ್ಲಾವಾರು ಸಮಗ್ರ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಅವರು ಕರೆ ನೀಡಿದ್ದಾರೆ.
ಮಧ್ಯಪ್ರದೇಶ, ಹರ್ಯಾಣ,. ರಾಜಸ್ಥಾನ, ಗುಜರಾತ್,ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ ಹಾಗೂ ಬಿಹಾರ ಸಹಿತ ಅನೇಕ ರಾಜ್ಯಗಳಲ್ಲಿ ಹರಡಿರುವ, ರಸ್ತೆ, ರೈಲ್ವೆ, ವಿದ್ಯುತ್ ಹಾಗೂ ತೈಲ ವಲಯಗಳ ಪ್ರಮುಖ ಮೂಲ ಸೌಕರ್ಯ ಯೋಜನೆಗಳ ಪ್ರಗತಿಯನ್ನೂ ಪ್ರಧಾನಿ ಮೋದಿ ಪರಿಶೀಲಿಸಿದ್ದಾರೆ.
ಭೂ ದಾಖಲೆಗಳನ್ನು ಆಧಾರ್‌ನೊಂದಿಗೆ ಆನ್‌ಲೈನ್‌ನಲ್ಲಿ ಅಡಕಗೊಳಿಸುವ ಕಾರ್ಯವನ್ನು ತುರ್ತಾಗಿ ನಡೆಸುವಂತೆಯೂ ಅವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.