ಅಮಿತ್ ಶಾರಿಂದ ಗಾಯಾಳು ಆರೆಸ್ಸೆಸ್ ಕಾರ್ಯಕರ್ತನ ಭೇಟಿ
ತಿರುವನಂತಪುರ, ಮಾ.24: ಎರಡು ವಾರಗಳ ಹಿಂದೆ ನಡೆದಿದ್ದ ಬಿಜೆಪಿ-ಸಿಪಿಎಂ ಘರ್ಷಣೆಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವ ಆರೆಸ್ಸೆಸ್ ಪ್ರಚಾರಕ ಅಮಲ್ ಕೃಷ್ಣ ಎಂಬವರನ್ನು ಭೇಟಿಯಾಗುವುದಕ್ಕಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಿರುವನಂತಪುರಕ್ಕೆ ಬಂದಿದ್ದಾರೆ. ಕೇರಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಅಂತಿಮ ಪಟ್ಟ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾ, ಸಹಿಷ್ಣುತೆಯ ಬಗ್ಗೆ ತಮಗೆ ಉಪನ್ಯಾಸ ಮಾಡುತ್ತಿರುವವರೇ, ಬಂಗಾಳ ಹಾಗೂ ಕೇರಳಗಳಲ್ಲಿ ಬಿಜೆಪಿಯ ವಿರುದ್ಧ ಹಿಂಸೆಯ ಹಾದಿ ಹಿಡಿದಿದ್ದಾರೆಂದು ಆರೋಪಿಸಿದರು. ಆದರೆ, ಅದು ಕೆಲಸ ಮಾಡಲಾರದೆಂದು ಅವರು ಹೇಳಿದರು.
ಹಿಂಸೆಯನ್ನು ಪ್ರಚೋದಿಸುತ್ತಿರುವ ಕಾಂಗ್ರೆಸ್ ಹಾಗೂ ಸಿಪಿಎಂ ಸರಕಾರಗಳಿಂದ ಹಿಂಸೆಯನ್ನು ತಡೆಗಟ್ಟಲು ಸಾಧ್ಯವಾಗದು. ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಎಂದು ಶಾ ಜನತೆಗೆ ವಿನಂತಿ ಮಾಡಿದರು.
ಕೇರಳ ವಿಧಾನಸಭೆಯಲ್ಲಿ ಇದುವರೆಗೆ ಖಾತೆಯನ್ನು ತೆರೆಯದಿರುವ ಬಿಜೆಪಿಹಲವು ಮಂದಿ ಸೆಲೆಬ್ರಿಟಿಗಳನ್ನು ಹಾಗೂ ಎಚ್ಚರಿಕೆಯಿಂದ ಆರಿಸಲಾಗುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಖಾತೆ ತೆರೆಯುವ ಗುರಿಯಿರಿಸಿಕೊಂಡಿದೆ. ಆದುದರಿಂದ ಈ ಬಾರಿ ರಾಜ್ಯದಲ್ಲಿ ಮೊದಲ ಸಲ ತ್ರಿಕೋನ ಸ್ಪರ್ಧೆ ನಡೆಯುವ ನಿರೀಕ್ಷಿಯಿದೆ.
ಪಕ್ಷವು, ಬಲಿಷ್ಠ ಈಡಿಗ ಸಮುದಾಯ ಹಾಗೂ ಕೇರಳದ ಒಂದು ಹಿಂದುಳಿದ ಜಾತಿ ಸಂಘಟನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಬಿಜೆಪಿಯ ಬೆಳೆಯುತ್ತಿರುವ ಪ್ರಭಾವದಿಂದ ಬೆದರಿರುವ ಸಿಪಿಎಂ, ತನ್ನ ಪಕ್ಷದ ಕಾರ್ಯಕರ್ತರನ್ನು ಗುರಿಯಿರಿಸುತ್ತಿದೆಯೆಂದು ಬಿಜೆಪಿ ಆರೋಪಿಸುತ್ತಿದ್ದರೆ, ಬಿಜೆಪಿಯು ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಪ್ರಚೋದನಾತ್ಮಕ ರಾಜಕೀಯ ಕಾರ್ಯಸೂಚಿಯನ್ನು ಅನುಸರಿಸುತ್ತಿದ್ದು, ಹಿಂಸೆಯನ್ನು ಹರಡುತ್ತಿದೆಯೆಂದು ಸಿಪಿಎಂ ದೂರುತ್ತಿದೆ.