×
Ad

ಇಂದು ಇಂಗ್ಲೆಂಡ್‌ಗೆ ಶ್ರೀಲಂಕಾ ಎದುರಾಳಿ

Update: 2016-03-25 23:55 IST

 ಹೊಸದಿಲ್ಲಿ, ಮಾ.25: ಅಫ್ಘಾನಿಸ್ತಾನದ ವಿರುದ್ಧ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ತಂಡ ಶನಿವಾರ ಇಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೂಪರ್-10 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾವನ್ನು ಎದುರಿಸಲಿದೆ.

ಸ್ಪಿನ್ನರ್‌ಗಳ ಸ್ನೇಹಿ ಫಿರೋಝ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ಜೋ ರೂಟ್ ಹಾಗೂ ಇಯಾನ್ ಮೊರ್ಗನ್ ಲಂಕೆಯ ಎಡಗೈ ಸ್ಪಿನ್ನರ್ ರಂಗನ ಹೆರಾತ್ ಹಾಗೂ ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್‌ಸೆ ದಾಳಿಯನ್ನು ಎದುರಿಸಲು ಸಿದ್ಧವಾಗಬೇಕಾಗಿದೆ.

3 ಪಂದ್ಯಗಳಲ್ಲಿ 2ರಲ್ಲಿ ಜಯ ಸಾಧಿಸಿರುವ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದರೆ ಸೆಮಿಫೈನಲ್ ಅವಕಾಶವನ್ನು ಹೆಚ್ಚಿಸಿಕೊಳ್ಳಲಿದೆ. ಮಾತ್ರವಲ್ಲ ಇತರ ತಂಡಗಳಿಗೂ ತಲೆ ನೋವು ಆರಂಭವಾಗಲಿದೆ.

 ಇಂಗ್ಲೆಂಡ್ ಟೂರ್ನಿಯಲ್ಲಿ ಈ ತನಕ ಮಿಶ್ರ ಫಲಿತಾಂಶ ಪಡೆದಿದೆ. ಮುಂಬೈನಲ್ಲಿ ನಡೆದಿದ್ದ ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ 182 ರನ್ ಗಳಿಸಿದ ಹೊರತಾಗಿಯೂ ಕ್ರಿಸ್ ಗೇಲ್ ದಾಳಿಗೆ ತತ್ತರಿಸಿದ್ದ ಇಂಗ್ಲೆಂಡ್ ಸೋಲನುಭವಿಸಿತ್ತು.

 ದಕ್ಷಿಣ ಆಫ್ರಿಕ ವಿರುದ್ಧ 230 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಜೋ ರೂಟ್ ಹಾಗೂ ಜಾಸನ್ ರೇ ಸಾಹಸದ ನೆರವಿನಿಂದ ಯಶಸ್ವಿಯಾಗಿ ಚೇಸಿಂಗ್ ಮಾಡಿತ್ತು. ರೂಟ್ ಕಳೆದೆರಡು ಪಂದ್ಯಗಳಲ್ಲಿ ಕ್ರಮವಾಗಿ 48 ಹಾಗೂ 83 ರನ್ ಗಳಿಸಿದ್ದು, ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಆದರೆ, ಇಂಗ್ಲೆಂಡ್ ತಂಡ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿತ್ತು. ಒಂದು ಹಂತದಲ್ಲಿ 85 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ಆಂಗ್ಲರು ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಆಲ್ ರೌಂಡರ್ ಮೊಯಿನ್ ಅಲಿ ತಂಡಕ್ಕೆ ಆಸರೆಯಾಗಿದ್ದರು.

 ಇಂಗ್ಲೆಂಡ್ ದಾಂಡಿಗರು ವೇಗದ ಬೌಲರ್‌ಗಳೆದುರು ಚೆನ್ನಾಗಿ ಆಡಬಲ್ಲರು. ಆದರೆ, ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಹೆರಾತ್ ಹಾಗೂ ವಾಂಡರ್‌ಸೆ ವಿರುದ್ಧ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ.

ಗಾಯಾಳು ಲಸಿತ್ ಮಾಲಿಂಗ ಬದಲಿಗೆ ಲಂಕಾ ತಂಡಕ್ಕೆ ಸೇರ್ಪಡೆಯಾಗಿರುವ ವಾಂಡರ್‌ಸೆ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದರು. ದಿಲ್ಲಿ ಪಿಚ್‌ನಲ್ಲಿ ಇಂಗ್ಲೆಂಡ ಮೊದಲು ಬೌಲಿಂಗ್ ಆಯ್ದುಕೊಂಡರೆ ಆಫ್ ಸ್ಪಿನ್ನರ್ ಅಲಿ ಹಾಗೂ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಎದುರಾಳಿಗಳಿಗೆ ಸವಾಲಾಗಬಲ್ಲರು.

ಪಾಕ್ ಸಂಜಾತ ರಶೀದ್ ಕಳೆದ ಪಂದ್ಯದಲ್ಲಿ ಅಫ್ಘಾನ್ ದಾಂಡಿಗರನ್ನು ಕಾಡಿದ್ದರು. ಲಂಕೆಯ ಹಿರಿಯ ಆರಂಭಿಕ ದಾಂಡಿಗ ತಿಲಕರತ್ನೆ ದಿಲ್ಶನ್ ಪ್ರಸ್ತುತ ಫಾರ್ಮ್‌ನಲ್ಲಿದ್ದಾರೆ. ಅವರಿಗೆ ಮತ್ತೊಂದು ತುದಿಯಿಂದ ಸರಿಯಾದ ಬೆಂಬಲ ಸಿಗುತ್ತಿಲ್ಲ.

ಪ್ರಸ್ತುತ ಬದಲಾವಣೆಯ ಹಂತದಲ್ಲಿರುವ ಶ್ರೀಲಂಕಾ ತಂಡ ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿದೆ. ದಿನೇಶ್ ಚಾಂಡಿಮಲ್ ಹಾಗೂ ಚಾಮರಾ ಕಪುಗಡೇರ ಉತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ.

ಪಂದ್ಯದ ಸಮಯ: ರಾತ್ರಿ 7:30

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News