ಕೊಲ್ಕತಾ: ಹಾಡಹಗಲೇ ವಾಲಿಬಾಲ್ ಆಟಗಾರ್ತಿಯ ಕಗ್ಗೊಲೆ!!
ಕೊಲ್ಕತ್ತಾ,ಮಾರ್ಚ್26: ಕೊಲ್ಕತಾದಲ್ಲಿ ಸಹ ಆಟಗಾರ್ತಿಯರಾದ ಸುಮಾರು ಮೂವತ್ತು ವಿದ್ಯಾರ್ಥಿನಿಯರ ಎದುರಿನಲ್ಲಿ ವಾಲಿಬಾಲ್ ಆಟಗಾರ್ತಿಯೊಬ್ಬಳನ್ನು ಯುವಕನೊಬ್ಬ ಇರಿದು ಕೊಂದು ಹಾಕಿರುವ ಘಟನೆ ವರದಿಯಾಗಿದೆ.ಸಂಗೀತ ಅಯ್ಕಾ(14) ಎಂಬ ಒಂಬತ್ತನೆ ತರಗತಿ ವಿದ್ಯಾರ್ಥಿನಿಯನ್ನು ಊರಿನವನಾದ ಸುಬ್ರತ ಸಿನ್ಹಾ ಎಂಬಾತ ಕ್ರೂರವಾಗಿ ಇರಿದು ಕೊಲೆಗೈದಿದ್ದಾನೆ. ಬಾಲಕಿ ಈತನ ಪ್ರೇಮ ನಿವೇದನೆಯನ್ನು ನಿರಾಕರಿಸಿದ್ದು ಕೊಲೆಪಾತಕಕ್ಕೆ ಕಾರಣವೆನ್ನಲಾಗುತ್ತಿದೆ.
ವಾಲಿಬಾಲ್ ಸ್ಪರ್ಧೆ ತರಬೇತಿಯ ನಡುವೆ ಶುಕ್ರವಾರ ಈ ಘಟನೆ ಸಂಭವಿಸಿದ್ದು ಸುಬ್ರತ ಸಿನ್ಹಾ ಕುಡುಗೊಲಿನಿಂದ ಓಡುತ್ತಾ ಬರುತ್ತಿರುವುದು ಕಾಣಿಸಿತ್ತು. ಕೋಚ್ ಕುರ್ಚಿಯನ್ನು ಎಸೆದು ಸಂಗೀತಾಳನ್ನು ರಕ್ಷಿಸಲು ಪ್ರಯತ್ನಿಸಿದರೂಸಾಧ್ಯವಾಗಿರಲಿಲ್ಲ. ಕೊಲೆಪಾತಕಿಯನ್ನು ನೋಡಿ ಸಂಗೀತಾ ವಾಲಿಬಾಲ್ ಗ್ರೌಂಡ್‌ನಿಂದ ಓಡಿ ಪಾರಾಗಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಈತ ಹಿಂದಿನಿಂದ ಸಂಗೀತಾಳನ್ನು ಇರಿದಿದ್ದಾನೆ. ಆನಂತರ ವಿದ್ಯಾರ್ಥಿನಿ ಮೈದಾನದಲ್ಲಿ ಕುಸಿದು ಬಿದ್ದಿದ್ದಳು. ಅಲ್ಲಿಗೂ ಬಿಡದೆ ಹಲವಾರು ಬಾರಿ ಆಕೆಯನ್ನು ಆತ ತಿವಿದು ಕೊಂದು ಹಾಕಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಭಯಾನಕ ದೃಶ್ಯವನ್ನು ನೋಡಿ ಬಾಲಕಿಯರಲ್ಲಿ ಹಲವಾರು ಮಂದಿ ಕುಸಿದು ಬಿದ್ದಿದ್ದರು. ದುಷ್ಕರ್ಮಿಯ ಸಮೀಪಕ್ಕೆ ಬರಲು ಸ್ಥಳೀಯ ನಿವಾಸಿಗಳು ಧೈರ್ಯ ತಳೆಯಲಿಲ್ಲ. ಆನಂತರ ಆತ ಓಡಿ ಪರಾರಿಯಾದ ನಂತರವೇ ಸಂಗೀತಾಳನ್ನು ಆಸ್ಪತ್ರೆಗೆ ತಲುಪಿಸಲಾಯಿತು. ಮೈದಾನದ ಬಳಿ ಗೂಡಂಗಡಿ ಇಟ್ಟಿದ್ದ ಸಂಗೀತಾಳ ಮಾವ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ಮಾಹಿತಿ ಸಿಕ್ಕಿಬಂದಾಗ ರಕ್ತದೋಕುಳಿಯಲ್ಲಿ ಮುಳುಗಿದ್ದ ಬಾಲಕಿ ಮೈದಾನದಲ್ಲಿ ಬಿದ್ದಿರುವುದನ್ನು ಅವರು ನೋಡಿದ್ದರು. ಬಾಲಕಿಯನ್ನು ಎತ್ತಿಕೊಂಡು ರಸ್ತೆಯ ಬದಿಗೆ ತಂದು ಹಲವು ಆಟೊ ಚಾಲಕರಲ್ಲಿನೆರವಾಗುವಂತೆ ಕೇಳಿಕೊಂಡರೂ ಯಾರು ಮುಂದೆ ಬರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಕೊನೆಗೆ ಸಂಗೀತಾಳನ್ನು ಆಸ್ಪತ್ರೆಗೆ ಸಾಗಿಸಿದಾಗ ಅಷ್ಟರಲ್ಲಿ ಆಕೆ ಮೃತಳಾಗಿದ್ದಳೆಂದು ವರದಿಯಾಗಿದೆ.