×
Ad

ಬಿಗ್ ಬಿ, ಧೋನಿ ತಿಳಿಯಿರಿ, ಪತ್ರಕರ್ತರು ಚಿಯರ್ ಲೀಡರ್ ಗಳಲ್ಲ !

Update: 2016-03-26 21:38 IST

ಬಾಂಗ್ಲಾ ವಿರುದ್ಧದ ಬೆಂಗಳೂರು ಪಂದ್ಯವನ್ನು ಗೆದ್ದ ಬಳಿಕ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಶ್ನೆ ಕೇಳಿದ ಪತ್ರಕರ್ತನನ್ನು " ನಿಮಗೆ ಭಾರತ ತಂಡ ಗೆದ್ದಿದ್ದು ಖುಷಿ ತಂದಿಲ್ಲ" ಎಂದು ಹೇಳಿ   ಮಹೇಂದ್ರ ಸಿಂಗ್ ಧೋನಿ ಸುಮ್ಮನಾಗಿಸಿದರು. ಬಾಲಿವುಡ್ ನ ಬಿಗ್ ಬಿ ವೀಕ್ಷಕ ವಿವರಣೆ ನೀಡುವವರು ಭಾರತೀಯ ಆಟಗಾರರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಉಪದೇಶ ನೀಡಿದರು. 

ಧೋನಿಗೆ ಅಂದು ಕೇಳಿದ ಪ್ರಶ್ನೆ : ಈ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದು ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳುವ ಬಗ್ಗೆ ಮಾತಿತ್ತು. ಆದರೆ ಹಾಗಾಗಿಲ್ಲ. ಬಹುತೇಕ ಸೋಲುವ ಹಂತದಿಂದ ಭಾರತ ಗೆಲ್ಲುವಲ್ಲಿ ಯಶಸ್ಸು ಕಂಡಿದೆ. ಈ ಜಯ ನಿಮಗೆ ಎಷ್ಟು ತೃಪ್ತಿ ತಂದಿದೆ ? 

ಧೋನಿ ನೀಡಿದ ಉತ್ತರ : ಮುಜ್ಹೆ ಪತಾ ಹೈ ಆಪ್ಕೋ ಖುಷಿ ನಹಿ ಹುಯಿ ಹೈ ಕಿ ಇಂಡಿಯಾ ಜೀತ್ ಗಯಾ. ಆಪ್ಕಿ ಆವಾಝ್ ಸೆ , ಆಪ್ಕಿ ಟೋನ್ ಸೆ , ಆಪ್ಕಿ ಸವಾಲ್ ಸೆ ಐಸ ಲಗ್ ರಹಾ ಹೈ ಕಿ ಆಪ್ಕೋ ಖುಷಿ ನಹಿ ಆಯೆ ಕಿ ಇಂಡಿಯಾ ಜೀತ್ ಗಯಾ ಆಜ್ ( ನನಗೆ ಗೊತ್ತಿದೆ. ನಿಮಗೆ ಭಾರತ ಇಂದು ಗೆದ್ದಿರುವುದು ಸಂತಸ ತಂದಿಲ್ಲ. ನಿಮ್ಮ ಧ್ವನಿಯಿಂದ, ನಿಮ್ಮ ಸ್ವರದಿಂದ , ನಿಮ್ಮ ಪ್ರಶ್ನೆಯಿಂದ ನಿಮಗೆ ಇವತ್ತು ಭಾರತ ಗೆದ್ದಿದ್ದು ಖುಷಿ ತಂದಿಲ್ಲ ಎಂದು ಗೊತ್ತಾಗುತ್ತದೆ )
ಹೀಗೆ ಕ್ರೀಡಾ ಪತ್ರಕರ್ತನನ್ನು ನೇರವಾಗಿ ಜರೆದು ಸುಮ್ಮನಾಗಿಸಿದ್ದು ಧೋನಿ ಮಾತ್ರವಲ್ಲ. ಪಂದ್ಯ ನಡೆಯುತ್ತಿರುವಾಗ ಅಮಿತಾಭ್ ಬಚ್ಚನ್ ಟ್ವೀಟ್ ಮಡಿ ಭಾರತೀಯ ಕಮೆಂಟೇ ಟರುಗಳು ಪ್ರತಿಸ್ಪರ್ಧಿಗಳಿಗಿಂತ ಭಾರತೀಯ ಆಟಗಾರರ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು " ದೇಶಭಕ್ತಿಯುತ ಉಪದೇಶ " ನೀಡಿದರು. ಅದನ್ನು ಧೋನಿ ಯಥಾವತ್ ರೀ ಟ್ವೀಟ್ ಮಾಡಿ ಮತ್ತೆ " ದೊಡ್ಡವರ ಉಪದೇಶವನ್ನು " ನೆನಪಿಸಿದರು. 

ಧೋನಿ ಹಾಗು ಬಿಗ್ ಬಿ ತಮ್ಮ ತಮ್ಮ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆಗಳನ್ನು ಮಾಡಿದವರು. ಸಾರ್ವಜನಿಕ ಜೀವನದಲ್ಲಿ ಗೌರವದಿಂದಲೇ ನಡೆದುಕೊಂಡವರು. ಆದರೆ ಈ ವಿಷಯದಲ್ಲಿ ಅವರು ಎಡವಿದ್ದಾರೆ ಎಂಬುದು ಸತ್ಯ. ಕ್ರೀಡಾ ಪತ್ರಕರ್ತರ ಅಥವಾ ಯಾವುದೇ ಪತ್ರಕರ್ತರ ಹಾಗು ವೀಕ್ಷಕ ವಿವರಣೆಗಾರರ ಕೆಲಸ ಯಾವುದೇ ಒಂದು ತಂಡದ ಮೇಲೆ ಫೋಕಸ್ ಮಾಡುವುದು ಅಥವಾ ಆ ತಂಡ ಗೆದ್ದಾಗ ಸೋತಾಗ ಸಂತಸ ಪಡುವುದು , ದುಖಿಸುವುದು ಅಲ್ಲ. ವಸ್ತುನಿಷ್ಟತೆ ಹಾಗು ನಿಷ್ಪಕ್ಷಪಾತ - ಇವೆರಡು ಪತ್ರಕರ್ತನ ವೃತ್ತಿಯ ಆಧಾರ ಸ್ಥಂಭಗಳು.

 ಧೋನಿ ಹಾಗು ಅಮಿತಾಭ್ ಇದನ್ನು ತಿಳಿದುಕೊಳ್ಳಬೇಕು. ಏಕೆಂದರೆ ಈ ಇಬ್ಬರು ಗಣ್ಯರು ಪತ್ರಕರ್ತರ ಈ ಎರಡು ಆಸ್ತಿಗಳಿಗೇ ಕೈ ಹಾಕಿದ್ದಾರೆ. " ನೀವು ನಮ್ಮ ಬೆಂಬಲಿಗರು ಅಥವಾ ವಿರೋಧಿಗಳು " ಎಂದು ಹೇಳುವಂತಹ ಟೋನ್ ಅವರ ಮಾತಿನಲ್ಲಿ ವ್ಯಕ್ತವಾಗಿದೆ. ಇದು ತಪ್ಪು. ಪತ್ರಕರ್ತರದ್ದು ಭಾರತ , ಪಾಕಿಸ್ತಾನ ಅಥವಾ ಯಾವುದೇ ತಂಡದ ಭೊಪರಾಕ್ ಹೇಳುವ ಕೆಲಸ ಅಲ್ಲ. ಭೊಪರಾಕ್ ಹೇಳಲು, ಪ್ರೀತಿಸಲು, ಬೆಂಬಲಿಸಲು ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ. ಪತ್ರಕರ್ತರ ಕೆಲಸ ಅದಲ್ಲ. ವಿಷಯವನ್ನು ವರದಿ ಮಾಡುವುದು, ನಿಷ್ಟುರವಾಗಿ ಪ್ರಶ್ನಿಸುವುದು ಹಾಗು ಸತ್ಯ ಹೇಳುವುದು - ಇವು ಪತ್ರಕರ್ತನ ಕೆಲಸ. 

ಧೋನಿ, ಅಮಿತಾಭ್ ಇಬ್ಬರಿಗೂ ಇದು ಸ್ಪಷ್ಟವಾಗಬೇಕು. ಇಲ್ಲದಿದ್ದರೆ ಅವರು ಪತ್ರಕರ್ತರನ್ನು ಚಿಯರ್ ಲೀಡರ್ ಗಳು ಎಂದು ತಪ್ಪು ತಿಳಿದುಬಿಡುವ ಅಪಾಯವಿದೆ. 
 

Writer - ಸುನಿಲ್ ಕುಮಾರ್ , ಮಂಗಳೂರು

contributor

Editor - ಸುನಿಲ್ ಕುಮಾರ್ , ಮಂಗಳೂರು

contributor

Similar News