×
Ad

ಭಾರತದ 27 ವಿಮಾನ ನಿಲ್ದಾಣಗಳಿಗೆ ಸಿಐಎಸ್‌ಎಫ್ ಭದ್ರತೆಯಿಲ್ಲ!

Update: 2016-03-27 23:39 IST

ಹೊಸದಿಲ್ಲಿ, ಮಾ.27: ಬ್ರಸೆಲ್ಸ್‌ನ ಝವೆಂಟಂ ವಿಮಾನ ನಿಲ್ದಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯು ವಿಮಾನ ನಿಲ್ದಾಣಗಳ ಭದ್ರತೆಯ ಕುರಿತು ಹೊಸ ಕಳವಳವನ್ನು ಮುನ್ನೆಲೆಗೆ ತಂದಿದೆ. ಭಾರತವು ನಿಧಿಯ ಅಭಾವದಿಂದಾಗಿ ಕಳೆದ 5 ವರ್ಷಗಳಿಂದ 2 ಡಜನ್‌ಗೂ ಹೆಚ್ಚು, ಅಂತಹ ಸೂಕ್ಷ್ಮ ಸೌಲಭ್ಯಗಳಿಗೆ ವಿಶೇಷ ಸಿಐಎಸ್‌ಎಫ್ ಭದ್ರತೆಯನ್ನು ಒದಗಿಸಿಲ್ಲವೆಂದು ಭದ್ರತಾ ಸಂಸ್ಥೆಗಳ ವರದಿಯೊಂದು ತಿಳಿಸಿದೆ. ಭಾರತೀಯ ಮೀಸಲು ಬೆಟಾಲಿಯನ್ (ಐಆರ್‌ಬಿ) ಅಥವಾ ರಾಜ್ಯ ಪೊಲೀಸ್ ಘಟಕಗಳಂತಹ ಇತರ ಭದ್ರತಾ ಪಡೆಗಳಿಂದ ರಕ್ಷಿಸಲ್ಪಡುತ್ತಿವೆ. ಅಧಿಕೃತ ಸಿಐಎಸ್‌ಎಫ್ ಭದ್ರತಾ ದಳವನ್ನು ಹೊರಗಿಡಲಾಗಿದೆ.

ಸಾರಿಗೆ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿಗಳ ಕುರಿತಾದ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯ ವರದಿಯೊಂದು, ಈ ವರ್ಷದ ಆರಂಭದಲ್ಲಿ ತನ್ನ ಕಳವಳವ್ಯಕ್ತಪಡಿಸಿತ್ತು. ನಮ್ಮ 8 ಅತೀ ಸೂಕ್ಷ್ಮ ಹಾಗೂ 19 ಸೂಕ್ಷ್ಮ ವಿಮಾನ ನಿಲ್ದಾಣಗಳಲ್ಲಿ ವಾಯು ಯಾನ ಕ್ಷೇತ್ರಗಳಲ್ಲಿ ಈಗಿರುವ ಏಕೈಕ ವಿಶೇಷ ದಳವಾದ ಸಿಐಎಸ್‌ಎಫ್‌ನ ಭದ್ರತೆ ಇರುವುದಿಲ್ಲವೆಂದು ತಿಳಿದು ಭಯವಾಗಿದೆಯೆಂದು ಅದು ಹೇಳಿತ್ತು.
ಸುಮಾರು 1.42 ಸಿಬ್ಬಂದಿ ಬಲದ ಕೇಂದ್ರೀಯ ಕೈಗಾರಿಕಾ ಭದ್ರತಾ ದಳವು ವಿಮಾನಯಾನ ಭದ್ರತಾ ಗುಂಪು (ಎಎಸ್‌ಜಿ) ಎಂಬ ತನ್ನ ಸಂಸ್ಥಾಪನೆಯಲ್ಲಿ ನಿಷ್ಠಾವಂತ ಹಾಗೂ ತರಬೇತಿ ಹೊಂದಿದ ಘಟಕವನ್ನು ಇದಕ್ಕಾಗಿಯೇ ರಚಿಸಿದೆ. ಅದರಲ್ಲಿ, ಹೆಚ್ಚುವರಿ ಮಹಾ ನಿರ್ದೇಶಕರ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ಸುಮಾರು 22 ಸಾವಿರ ಪುರುಷ ಹಾಗೂ ಮಹಿಳಾ ಕಮಾಂಡೊಗಳಿದ್ದಾರೆ.
ಇಂಡಿಯನ್ ಏರ್‌ಲೈನ್ಸ್‌ನ ಐಸಿ-814 ವಿಮಾನಾಪಹರಣದ ಬಳಿಕ, 2010ರಲ್ಲಿ ಜೈಪುರ ವಿಮಾನ ನಿಲ್ದಾಣದಲ್ಲಿ ಮೊತ್ತ ಮೊದಲ ಬಾರಿ ಎಎಸ್‌ಜಿಯನ್ನು ಭದ್ರತೆಗಾಗಿ ನೇಮಿಸಲಾಗಿತ್ತು. ಕೊನೆಯ ಎಎಸ್‌ಜಿಯನ್ನು 2011ರಲ್ಲಿ ದಿಯು ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿತ್ತು.
ಸಿಐಎಸ್‌ಎಫ್ ಹಾಗೂ ಗುಪ್ತಚರ ಸಂಸ್ಥೆಗಳು ಇತ್ತೀಚೆಗೆ ಸಿದ್ಧಪಡಿಸಿರುವ ವರದಿಯೊಂದು, ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಬೇಕೆಂಬ ಸಂಸದೀಯ ಸ್ಥಾಯಿ ಸಮಿತಿಯ ಅಭಿಪ್ರಾಯಕ್ಕೆ ಒತ್ತು ನೀಡಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News