×
Ad

‘ಸರಕಾರದ ಧರ್ಮವಾಗಿ ಇಸ್ಲಾಂ ಬೇಡ’ ಅರ್ಜಿಯನ್ನು ತಿರಸ್ಕರಿಸಿದ ಬಾಂಗ್ಲಾ ಹೈಕೋರ್ಟ್

Update: 2016-03-28 19:58 IST

ಢಾಕಾ, ಮಾ. 28: ಇಸ್ಲಾಮ್‌ಗೆ ನೀಡಲಾಗಿರುವ ಸರಕಾರದ ಧರ್ಮ ಎಂಬ ಮಾನ್ಯತೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಕೋರಿ ಜಾತ್ಯತೀತ ಕಾರ್ಯಕರ್ತರು ಸಲ್ಲಿಸಿರುವ ಅರ್ಜಿಯನ್ನು ಬಾಂಗ್ಲಾದೇಶದ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ದೇಶಾದ್ಯಂತ ವ್ಯಕ್ತವಾದ ಪ್ರಬಲ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ನಿರ್ಧಾರ ತೆಗೆದುಕೊಂಡಿದೆ.
ಮೂವರು ನ್ಯಾಯಾಧೀಶರನ್ನೊಳಗೊಂಡ ವಿಶೇಷ ನ್ಯಾಯಪೀಠವೊಂದು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಕೆಲವೇ ಕ್ಷಣಗಳಲ್ಲಿ ಯಾವುದೇ ಸಾಕ್ಷ ಮಂಡನೆಗೆ ಅವಕಾಶ ನೀಡದೆ ಅರ್ಜಿಯನ್ನು ವಜಾಗೊಳಿಸಿತು.
28 ವರ್ಷಗಳ ಹಿಂದೆಯೂ ಈ ಪ್ರಸ್ತಾಪ ಒಮ್ಮೆ ಚಾಲ್ತಿಗೆ ಬಂದಿತ್ತು. ಆಗ ಅದಕ್ಕೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು.
 1971ರ ಯುದ್ಧದಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ ಪಡೆದು ಅಸ್ತಿತ್ವಕ್ಕೆ ಬಂದ ಬಾಂಗ್ಲಾದೇಶವನ್ನು ಆರಂಭದಲ್ಲಿ ಜಾತ್ಯತೀತ ದೇಶವೆಂದೇ ಘೋಷಿಸಲಾಗಿತ್ತು. ಆದರೆ, 1988ರಲ್ಲಿ ಆಗಿನ ಸೇನಾ ಆಡಳಿತಗಾರ ಜನರಲ್ ಹುಸೈನ್ ಮುಹಮ್ಮದ್ ಇರ್ಶಾದ್ ತನ್ನ ಅಧಿಕಾರವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಇಸ್ಲಾಮನ್ನು ಸರಕಾರಿ ಧರ್ಮವನ್ನಾಗಿ ಮಾಡಿದರು.
ನ್ಯಾಯಾಲಯದ ತೀರ್ಪು ಹೊರಬಿದ್ದಕೂಡಲೇ, ಜಮಾತೆ ಇಸ್ಲಾಮಿ ಪಕ್ಷವು ತಾನು ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದ ಕರೆಯನ್ನು ಹಿಂದಕ್ಕೆ ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News