ಜಿದ್ದಾದಲ್ಲಿ ಮರಳು ಬಿರುಗಾಳಿ: 2 ಸಾವು
ರಿಯಾದ್/ಜಿದ್ದಾ, ಮಾ. 28: ಸೌದಿ ಅರೇಬಿಯದ ಜಿದ್ದಾದಲ್ಲಿ ರವಿವಾರ ಪ್ರಬಲ ಮರಳು ಬಿರುಗಾಳಿ ಬೀಸಿದ್ದು, ಇದರಿಂದಾಗಿ ಉಂಟಾದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬಿರುಗಾಳಿಯ ಪರಿಣಾಮವಾಗಿ ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ವಿಮಾನಗಳ ವೇಳಾಪಟ್ಟಿಯನ್ನು ಬದಲಿಸಲಾಗಿದೆ.
ಮರಳನ್ನು ಹೊತ್ತ ಬಿರುಗಾಳಿ ಗಂಟೆಗೆ 60 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಬೀಸುತ್ತಿದ್ದು, ರವಿವಾರದ ಹೆಚ್ಚಿನ ಭಾಗ ನಗರವಿಡೀ ಧೂಳಿನಿಂದ ಆವೃತವಾಗಿತ್ತು. ಧೂಳಿನಿಂದಾಗಿ ದೃಗ್ಗೋಚರತೆ ಗಣನೀಯವಾಗಿ ಕಡಿಮೆಯಾಗಿತ್ತು ಹಾಗೂ ಕೆಲವು ಪ್ರದೇಶಗಳಲ್ಲಿ ಮರಗಳು ಧರೆಗುಳಿದವು. ಸಣ್ಣ ಅಂಗಡಿಗಳು ಬಾಗಿಲು ಎಳೆಯಬೇಕಾಯಿತು.
‘‘ಜಿದ್ದಾ ನಾಗರಿಕ ಸೇವೆಗಳ ಕಚೇರಿಗೆ 20 ಕರೆಗಳು ಬಂದಿವೆ. ಲೋಹಗಳು, ಕಂಬಗಳು, ತಾಳೆ ಮತ್ತು ಇತರ ಮರಗಳು ಬಿದ್ದಿದ್ದಕ್ಕೆ ಸಂಬಂಧಿಸಿದ ಕರೆಗಳು ಅದಾಗಿದ್ದವು. ಬೀದಿ ದೀಪದ ಕಂಬಗಳು ಮತ್ತು ಕಟ್ಟಡಗಳೂ ಉರುಳಿವೆ’’ ಎಂದು ಮಕ್ಕಾದಲ್ಲಿರುವ ನಾಗರಿಕ ಸೇವೆಗಳ ವಕ್ತಾರ ಕರ್ನಲ್ ಸಯೀದ್ ಸರ್ಹನ್ ತಿಳಿಸಿದರು.
ರಸ್ತೆಯಲ್ಲಿನ ದೃಗೋಚರತೆ ಕೊರತೆಯ ಕಾರಣದಿಂದಾಗಿ ಅಲ್-ಸಲಾಮ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡರು. ಅಪಘಾತದ ಬಳಿಕ ಸಂತ್ರಸ್ತರು ತಮ್ಮ ಕಾರುಗಳಲ್ಲೇ ಸಿಲುಕಿಕೊಂಡಿದ್ದರು. ಅವರನ್ನು ಬಳಿಕ ರಕ್ಷಣಾ ತಂಡವೊಂದು ಹೊರಗೆಳೆಯಿತು.
ಜಿದ್ದಾದಲ್ಲಿ ಹವಾಮಾನವು ಸೋಮವಾರದ ವೇಳೆಗೆ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಹವಾಮಾನ ಕಚೇರಿಯ ಮೂಲಗಳು ತಿಳಿಸಿವೆ.
ಶಾಲೆಗಳಿಗೆ ಬಾಗಿಲು
ರವಿವಾರ ಶಾಲೆಗಳು ಎಂದಿನಂತೆ ಆರಂಭವಾಗಿದ್ದರೂ ಕೆಟ್ಟ ಹವಾಮಾನದ ಹಿನ್ನೆಲೆಯಲ್ಲಿ ಬೆಳಗ್ಗೆ 10.30ರ ವೇಳೆಗೆ ಮುಚ್ಚಲಾಯಿತು ಎಂದು ಶಾಲೆಯೊಂದರ ಪ್ರಾಂಶುಪಾಲರೊಬ್ಬರು ‘ಅರಬ್ ನ್ಯೂಸ್’ಗೆ ತಿಳಿಸಿದರು.
ವಿಮಾನಗಳ ಹಾರಾಟ ವಿಳಂಬ
ಜಿದ್ದಾದಲ್ಲಿರುವ ದೊರೆ ಅಬ್ದುಲ್ಲಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನಗಳ ಹಾರಾಟ ವೇಳಾಪಟ್ಟಿಯನ್ನು ಬದಲಿಸಿದ್ದಾರೆ. ವಿಮಾನಗಳ ಹೊಸ ವೇಳಾಪಟ್ಟಿಗಾಗಿ ಸಂಬಂಧಿತ ಏರ್‌ಲೈನ್ಸ್ ಕಂಪೆನಿಗಳನ್ನು ಸಂಪರ್ಕಿಸುವಂತೆ ಅವರು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ.