×
Ad

ವಾಯುಪಡೆ ಪೈಲಟ್‌ಗಳಿಂದ ರಾಷ್ಟ್ರೀಯ ದಾಖಲೆ

Update: 2016-03-28 23:27 IST

ಹೊಸದಿಲ್ಲಿ, ಮಾ.28: ಭಾರತೀಯ ವಾಯುಪಡೆಯ 14 ಮಂದಿ ಪೈಲಟ್‌ಗಳ ತಂಡವೊಂದು 10 ಸಾವಿರ ಕಿ.ಮೀ. ವಿಸ್ತೀರ್ಣದ ಪ್ಯಾರಾಮೋಟಾರ್‌ನಲ್ಲಿ ಸಾಹಸ ಯಾತ್ರೆಯನ್ನು ಕೈಗೊಳ್ಳುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದೆ.

ಪ್ಯಾರಾಮೋಟಾರ್ ವಾಹನಗಳಲ್ಲಿ ಹಾರಾಟ ನಡೆಸಿದ ಪೈಲಟ್‌ಗಳು ಪರ್ವತಗಳು, ಕಡಲಕಿನಾರೆಗಳು, ಅರಣ್ಯಗಳು ಹಾಗೂ ಮರುಭೂಮಿ ಮತ್ತಿತರ ವೈವಿಧ್ಯಮಯ ವಾತಾವರಣವಿರುವ ಪ್ರದೇಶಗಳನ್ನು ಹಾದುಹೋಗಿದ್ದು, ವಾತಾವರಣದ ವೈಪರೀತ್ಯಗಳನ್ನು ಎದುರಿಸುತ್ತಲೇ ತಮ್ಮ ಸಾಹಸಮಯ ಹಾರಾಟವನ್ನು ಪೂರ್ಣಗೊಳಿಸಿದ್ದಾರೆ’’ ಎಂದು ವಾಯುಪಡೆಯ ವಕ್ತಾರರು ತಿಳಿಸಿದ್ದಾರೆ,
  ಭಾರತೀಯ ವಾಯುಪಡೆಯ 14 ಪೈಲಟ್‌ಗಳ ‘ಏರ್‌ವಾರಿಯರ್ಸ್’ ತಂಡವು ಫೆಬ್ರವರಿ 1ರಂದು 10 ಸಾವಿರ ಕಿ.ಮೀ. ವಿಸ್ತೀರ್ಣದ ‘ಪ್ರದಕ್ಷಿಣೆ’ ಸಾಹಸಮಯ ಹಾರಾಟವನ್ನು ಪಶ್ಚಿಮ ಬಂಗಾಳದ ಕಲೈಕುಂಡಾ ವಾಯುನೆಲೆಯಲ್ಲಿ ಆರಂಭಿಸಿತ್ತು. ಇಂದು ತನ್ನ ಸಾಹಸಯಾತ್ರೆಯನ್ನು ಪೂರ್ಣಗೊಳಿಸಿ ವಾಪಸಾದ ತಂಡಕ್ಕೆ ವಾಯುನೆಲೆಯಲ್ಲಿ ಅಭೂತಪೂರ್ವ ಸ್ವಾಗತವನ್ನು ನೀಡಲಾಯಿತು.
 ವಿಂಗ್ ಕಮಾಂಡರ್ ಎಂ.ಪಿ.ಎಸ್. ಸೋಲಂಕಿ ನೇತೃತ್ವದ 14 ಮಂದಿ ಸದಸ್ಯರ ‘ಸ್ಕೈರೈಡರ್’ ತಂಡವು ಈ ಸಾಹಸಮಯ ಹಾರಾಟದೊಂದಿಗೆ ಹಾಲಿ 9,132 ಕಿ.ಮೀ.ಗಳ ರಾಷ್ಟ್ರೀಯ ದಾಖಲೆಯನ್ನು ಹಿಂದಿಕ್ಕಿದೆ.
ತಂಡವು ಪೂರ್ವ ಕರಾವಳಿಯಿಂದ ಕನ್ಯಾಕುಮಾರಿಯವರೆಗೆ ಪ್ರಯಾಣಿಸಿ, ನಂತರ ಪಶ್ಚಿಮ ಕರಾವಳಿಯ ದಾರಿಯಾಗಿ ಗುಜರಾತ್‌ವರೆಗೆ ಪ್ರಯಾಣಿಸಿತ್ತು. ಆನಂತರ ಅದು ರಾಜಸ್ತಾನ, ಪಂಜಾಬ್‌ನ ಬಯಲುಪ್ರದೇಶಗಳು ಹಾಗೂ ಹಿಮಾಲಯದ ತಪ್ಪಲುಪ್ರದೇಶಗಳ ಮೇಲೂ ಹಾರಾಟ ನಡೆಸಿತ್ತು. ಬಳಿಕ ತಂಡವು ಹೊಸದಿಲ್ಲಿಯವರೆಗೆ ದಕ್ಷಿಣಕ್ಕೆ ಸಂಚರಿಸಿ, ಉತ್ತರಪ್ರದೇಶ ಹಾಗೂ ಬಿಹಾರದ ಮೇಲೆ ಹಾದು ಕಾಲೈಕುಂಡಾಗೆ ಹಿಂದಿರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News