ಗಂಡನನ್ನು ‘ಧಡಿಯ ಆನೆ’ ಎಂದು ಕರೆದರೆ ವಿಚ್ಛೇದನಕ್ಕೆ ದಾರಿ?
ಹೊಸದಿಲ್ಲಿ, ಮಾ.28: ಗಂಡನನ್ನು ಮೋಟಾ ಹಾಥಿ (ಧಡಿಯ ಆನೆ)ಎಂದು ಕರೆದು ಅವಮಾನಿಸಿದರೆ ಅದು ವಿಚ್ಛೇದನಕ್ಕೆ ದಾರಿ ಮಾಡಿಕೊಟ್ಟಂತೆ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ. ಧಡೂತಿ ದೇಹ ಹೊಂದಿದ್ದ ವ್ಯಕ್ತಿಯೊಬ್ಬ ತನ್ನನ್ನು ಮೋಟಾ ಹಾಥಿಯೆಂದು ಕರೆಯುತ್ತಿದ್ದ ಹಾಗೂ ತಾನು ಆಕೆಯ ಲೈಂಗಿಕ ಬಯಕೆಗಳನ್ನು ಪೂರೈಸುತ್ತಿಲ್ಲವೆಂಬ ನೆಪದಲ್ಲಿ ತನಗೆ ಹಿಂಸೆ ನೀಡಿದ ಪತ್ನಿಯಿಂದ ವಿಚ್ಛೇದನ ಕೋರಿ 2012ರಲ್ಲಿ ಕುಟುಂಬ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯಂತೆ ಕೋರ್ಟ್ ಆತನಿಗೆ ವಿಚ್ಛೇದನ ನೀಡಿದ್ದರೂ ಆತನ ಪತ್ನಿ ಇದನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‌ನ ಕದ ತಟ್ಟಿದ್ದಳು.
ಆದರೆ ಕೋರ್ಟ್ ಆಕೆಯ ಅರ್ಜಿಯನ್ನು ತಿರಸ್ಕರಿಸಿ ಕುಟುಂಬ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ‘‘ಹಾಥಿ, ಮೋಟಾ ಹಾಥಿ ಮುಂತಾದ ಹೆಸರಿನಲ್ಲಿ ಪತಿಯನ್ನು ಕರೆದು ಅವಮಾನಿಸುವುದು ಆತನ ಆತ್ಮಗೌರವಕ್ಕೆ ಚ್ಯುತಿ ತಂದಂತೆ,’’ ಎಂದು ವಿಚಾರಣೆಯ ಸಂದರ್ಭ ಜಸ್ಟಿಸ್ ವಿಪಿನ್ ಸಂಘಿ ತಿಳಿಸಿದರು.
ತನ್ನ ಪತ್ನಿ ತನ್ನ ಕೆನ್ನೆಗೆ ಹೊಡೆದಿದ್ದಲ್ಲದೆ ತನ್ನನ್ನು ಮನೆ ಬಿಟ್ಟು ಹೋಗುವಂತೆ ಕೂಡ ಹೇಳಿದ್ದಳು ಎಂದು ಆ ವ್ಯಕ್ತಿ ನೀಡಿದ ಹೇಳಿಕೆಯನ್ನು ಕೂಡ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
‘‘ತನ್ನ ಪತ್ನಿ ತನ್ನ ಆಭರಣ ಮತ್ತಿತರ ವಸ್ತುಗಳೊಂದಿಗೆ ಮನೆ ಬಿಟ್ಟು ಹೋಗಿ ತಾನು ಪತಿಗೆ ವಿಧೇಯಳಾಗಿರಬೇಕಿದ್ದರೆ ಆತನ ಆಸ್ತಿಯನ್ನು ತನ್ನ ಹೆಸರಿಗೆ ಬರೆಯಬೇಕೆಂಬ ಬೇಡಿಕೆಯಿಟ್ಟಿದ್ದಳು,’’ ಎಂದೂ ಆ ವ್ಯಕ್ತಿ ಆರೋಪಿಸಿದ್ದ. ಫೆಬ್ರವರಿ 11, 2005ರಂದು ತಾನು ಆಕೆಯನ್ನು ಸೇರಬಯಸಿದಾಗ ಆಕೆ ತನ್ನ ಖಾಸಗಿ ಭಾಗಗಳಿಗೆ ಹೊಡೆದು ಗಾಯಗೊಳಿಸಿದ್ದಾಗಿಯೂ ಆತ ಆರೋಪಿಸಿದ್ದ.
ಈ ಎಲ್ಲಾ ಘಟನೆಗಳೂ ಪತಿ ಪತ್ನಿಯರ ನಡುವೆ ಸಾಧಾರಣವಾಗಿ ನಡೆಯುವ ಕಲಹಗಳು ಎಂದು ಪರಿಗಣಿಸುವ ಹಾಗಿಲ್ಲ ಎಂದೂ ಕೋರ್ಟ್ ಹೇಳಿ ವಿಚ್ಛೇದನಕ್ಕೆ ಅನುಮತಿಸಿದ ಕುಟುಂಬ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು.