ಮೆಹಬೂಬ ‘ಭಾರತ್ ಮಾತಾಕಿ ಜೈ’ ಘೋಷಣೆ ಕೂಗುತ್ತಾರೆಯೇ? ಶಿವಸೇನೆ ಪ್ರಶ್ನೆ
ಮುಂಬೈ, ಮಾ.28: ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಬೆಂಬಲದೊಂದಿಗೆ ಸರಕಾರ ರಚಿಸಲು ಪಿಡಿಪಿ ಹಕ್ಕು ಪ್ರತಿಪಾದಿಸಿರುವ ಹಿನ್ನೆಲೆಯಲ್ಲಿ, ಉಗ್ರರ ದಾಳಿಯಲ್ಲಿ ಜೀವ ಕಳೆದುಕೊಂಡ ಕಾಶ್ಮೀರಿ ಪಂಡಿತರ ಗೌರವಾರ್ಥವಾಗಿ ಮುಖ್ಯಮಂತ್ರಿ ಅಭ್ಯರ್ಥಿ ಮೆಹಬೂಬ ಮುಫ್ತಿ ಅವರು ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆ ಕೂಗುತ್ತಾರೆಯೇ? ಎಂದು ಶಿವಸೇನೆ ಪ್ರಶ್ನಿಸಿದೆ.
ಕಾಶ್ಮೀರ ಸರಕಾರ ರಚನೆ ವಿಚಾರ ಎರಡು ತಿಂಗಳಿಂದ ಕಗ್ಗಂಟಾಗಿಯೇ ಉಳಿದ ಬಳಿಕ ಪಿಡಿಪಿ ಮುಖ್ಯಸ್ಥೆ ಸರಕಾರ ರಚನೆಯ ಹಕ್ಕು ಪ್ರತಿಪಾದಿಸಿದರು. ಬಿಜೆಪಿ ಬೆಂಬಲದೊಂದಿಗೆ ಕಾಶ್ಮೀರದ ಮೊತ್ತ ಮೊದಲ ಮುಸ್ಲಿಂ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
ಬಿಜೆಪಿ ಹಾಗೂ ಮೆಹಬೂಬ ಎಂದಿಗೂ ಪರಸ್ಪರ ವಿಶ್ವಾಸದಿಂದಿರಲು ಸಾಧ್ಯವಿಲ್ಲ. ಆಕೆಯ ರಾಷ್ಟ್ರವಿರೋಧಿ ಭಾಷಣ ಹಾಗೂ ಪ್ರತ್ಯೇಕತಾವಾದಿಗಳ ಬಗ್ಗೆ ಇರುವ ಒಲವು, ಈಗಾಗಲೇ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರವಿರೋಧಿ ಘೋಷಣೆ ಕೂಗಿದವರ ಬಗ್ಗೆ ಅವರು ಈಗಾಗಲೇ ಮೃದು ಧೋರಣೆ ಪ್ರದರ್ಶಿಸಿದ್ದಾರೆ ಎಂದು ಪಕ್ಷದ ಮುಖವಾಣಿ ‘ಸಾಮಾ’ದಲ್ಲಿ ಹೇಳಲಾಗಿದೆ.
ಹೀಗಾಗಿ ಬಿಜೆಪಿ ಆಕೆಯನ್ನು ಬೆಂಬಲಿಸುವ ಮೂಲಕ ಸಮಾಧಾನದಿಂದ ಇರಬಹುದು; ಆದರೆ ದೇಶ ಈ ಬಗ್ಗೆ ಆತಂಕ ಹೊಂದಿದೆ. ಬಿಜೆಪಿ ಪ್ರಕಾರ, ‘ಭಾರತ್ ಮಾತಾಕಿ ಜೈ’ ಎನ್ನುವುದು ರಾಷ್ಟ್ರೀಯತೆಯನ್ನು ಅಭಿವ್ಯಕ್ತಿಪಡಿಸುವ ಘೋಷಣೆ. ಆದರೆ ಮೆಹಬೂಬ ಈ ಘೋಷಣೆ ಕೂಗುವರೇ? ಎಂದು ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷವಾಗಿರುವ ಶಿವಸೇನೆ ಪ್ರಶ್ನಿಸಿದೆ.
ಲಕ್ಷಾಂತರ ಮಂದಿ ಕಾಶ್ಮೀರಿ ಪಂಡಿತರು ಉಗ್ರರ ದಾಳಿಯಿಂದ ಜೀವ ಕಳೆದುಕೊಂಡಿದ್ದಾರೆ. ಕಾಶ್ಮೀರಿ ಪಂಡಿತರ ಸ್ಥಿತಿಯನ್ನು ಹಸನಾಗಿಸುವುದು ಬಿಜೆಪಿ ಹಾಗೂ ಪಿಡಿಪಿಯ ಕರ್ತವ್ಯ ಎಂದು ವಿವರಿಸಿದೆ.
ಸಂಸತ್ ಭವನ ದಾಳಿ ಪ್ರಕರಣದ ಆರೋಪಿ ಅಫ್ಝಲ್ ಗುರು ವಿಚಾರದಲ್ಲಿ ಹೊಂದಿದ್ದ ಮುಫ್ತಿ ನಿಲುವು ಬದಲಾಗಿದೆಯೇ ಎಂದು ಪ್ರಶ್ನಿಸಿರುವ ಶಿವಸೇನೆ, ಅವರ ಪಕ್ಷ ಆತನನ್ನು ಉಗ್ರ ಎಂದು ಖಚಿತಪಡಿಸಲೂ ನಿರಾಕರಿಸಿತ್ತು ಎಂದು ಹೇಳಿದೆ.
ತಿಹಾರ್ ಜೈಲು ಆವರಣದ ಸಮಾಧಿಯಿಂದ ಅಫ್ಝಲ್ ಶವವನ್ನು ಹೊರತೆಗೆದು, ಕಾಶ್ಮೀರದಲ್ಲಿ ಹೂಳಲು ಕಳುಹಿಸಬೇಕೇ ಎಂದು ವ್ಯಂಗ್ಯವಾಡಿದೆ.