×
Ad

ಪಠಾಣ್‌ಕೋಟ್ ವಾಯುನೆಲೆಗೆ ಪಾಕ್ ತಂಡದ ಭೇಟಿ ಅನುಮತಿ ಎನ್‌ಐಎಗೆ ಸೇರಿದ ವಿಚಾರ: ಪಾರಿಕ್ಕರ್

Update: 2016-03-28 23:37 IST

ಹೊಸದಿಲ್ಲಿ,ಮಾ.28: ಪಠಾಣ್‌ಕೋಟ್ ವಾಯುನೆಲೆಗೆ ಪಾಕಿಸ್ತಾನದ ಜಂಟಿ ತನಿಖಾ ತಂಡದ ಭೇಟಿಯ ಕುರಿತು ಭುಗಿಲೆದ್ದಿರುವ ವಿವಾದದಿಂದ ದೂರವುಳಿಯಲು ಬಯಸಿರುವ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು, ‘‘ಅಪರಾಧ ನಡೆದ ಸ್ಥಳವು’’ ಸಂಪೂರ್ಣವಾಗಿ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ)ದ ನಿಯಂತ್ರಣದಲ್ಲಿದ್ದು, ಅಲ್ಲಿಗೆ ಪಾಕ್ ತನಿಖಾ ತಂಡವು ಹೋಗಬೇಕೇ ಬೇಡವೇ ಎಂಬುದನ್ನು ಅದು ನಿರ್ಧರಿಸಬೇಕಾಗಿದೆಯೆಂದರು.

 ವಾಯುನೆಲೆಗೆ ಪಾಕ್ ತನಿಖಾ ತಂಡದ ಪ್ರವೇಶಕ್ಕೆ ಯಾವುದೇ ಅನುಮತಿಯನ್ನು ನೀಡಲಾಗಿಲ್ಲವೆಂದು ತಿಳಿಸಿದ ಅವರು, ಅಪರಾಧ ನಡೆದ ಸ್ಥಳದಲ್ಲಿ ಸಂಪೂರ್ಣವಾಗಿ ತಡೆಬೇಲಿಗಳನ್ನು ನಿರ್ಮಿಸಲಾಗಿದ್ದು, ಹೊರಗಿನಿಂದ ನೋಡಲೂ ಸಾಧ್ಯವಿಲ್ಲದಾಗಿದೆ. ಪಾಕಿಸ್ತಾನಿ ತಂಡದ ಭೇಟಿಗೆ ರಕ್ಷಣಾ ಇಲಾಖೆಗೆ ಸೇರಿದ ಯಾವುದೇ ಸೊತ್ತನ್ನು ಬಳಸಲಾಗುವುದಿಲ್ಲವೆಂದು ಅವರು ತಿಳಿಸಿದ್ದಾರೆ.
‘‘ಪಠಾಣ್‌ಕೋಟ್ ದಾಳಿ ನಡೆದ ಸ್ಥಳವನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎಗೆ ಬಹಳಷ್ಟು ಹಿಂದೆಯೇ ಹಸ್ತಾಂತರಿಸಲಾಗಿದೆ. ಅಲ್ಲಿಗೆ ಯಾರು ಪ್ರವೇಶಿಸಬೇಕು, ಯಾರು ತನಿಖೆ ನಡೆಸಬೇಕು ಎಂಬುದನ್ನು ಎನ್‌ಐಎ ಮಾತ್ರವೇ ನಿರ್ಧರಿಸಲಿದೆ’’ ಎಂದು ಪಾರಿಕ್ಕರ್ ತಿಳಿಸಿದ್ದಾರೆ.
 ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ‘ರಕ್ಷಣಾ ಎಕ್ಸ್‌ಪೋ’ ಮೇಳದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಪಠಾಣ್‌ಕೋಟ್ ವಾಯುನೆಲೆಯಲ್ಲಿ ಎಲ್ಲಿಗೆ ಬೇಕಾದರೂ ತೆರಳುವುದಕ್ಕೆ ನಾವು ಪಾಕ್ ತಂಡಕ್ಕೆ ಅನುಮತಿ ನಿರಾಕರಿಸಿರುವುದಾಗಿ ಪಾರಿಕ್ಕರ್ ತಿಳಿಸಿದರು.
ಪಾರಿಕ್ಕರ್ ಈ ಮೊದಲು ಕೂಡಾ ಪಠಾಣ್‌ಕೋಟ್ ವಾಯುನೆಲೆಗೆ ಪಾಕ್ ತನಿಖಾ ತಂಡದ ಯೋಜಿತ ಭೇಟಿಗೆ ತನ್ನ ವಿರೋಧವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಅಪರಾಧ ನಡೆದ ಸ್ಥಳವು ಅತ್ಯಂತ ಕನಿಷ್ಠ ಸಂವೇದನಕಾರಿ ಪ್ರದೇಶವಾಗಿದೆ. ತರಬೇತಿ ನಿರತ ವಿದೇಶಿಯರ ಹಾಸ್ಟೆಲ್ ಹಾಗೂ ಭೋಜನಗೃಹವನ್ನು ಹೊರತುಪಡಿಸಿ ಅಲ್ಲಿ ಇತರ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲವೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News