×
Ad

63ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಅಮಿತಾಭ್, ಕಂಗನಾ ಶ್ರೇಷ್ಠ ನಟ/ನಟಿ

Update: 2016-03-28 23:53 IST

 

‘ಬಾಹುಬಲಿ’ ಶ್ರೇಷ್ಠ ಚಿತ್ರ

ಬನ್ಸಾಲಿ ಶ್ರೇಷ್ಠ ನಿರ್ದೇಶಕ; ‘ಬಾಜಿರಾವ್ ಮಸ್ತಾನಿ’ಗೆ 5 ಪ್ರಶಸ್ತಿ

ಹೊಸದಿಲ್ಲಿ, ಮಾ.28: 63ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಸೋಮವಾರ ಘೋಷಿಸಲಾಗಿದ್ದು, ಎ.ಎ. ರಾಜಾವೌಳಿ ನಿರ್ದೇಶನದ ಬಹುಭಾಷಾ ಚಿತ್ರ ‘ಬಾಹುಬಲಿ’ ಶ್ರೇಷ್ಠ ಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ. ‘ಪಿಕು’ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಶ್ರೇಷ್ಠ ನಟ ಪ್ರಶಸ್ತಿ ದೊರೆತಿದ್ದು, ‘ತನುವೆಡ್ಸ್’ ಚಿತ್ರಕ್ಕಾಗಿ ಕಂಗನಾ ರಣಾವತ್ ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ.

ರಾಮ್‌ರೆಡ್ಡಿ ನಿರ್ದೇಶನದ ‘ತಿಥಿ’, ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ಪಡೆದಿದೆ. ಐತಿಹಾಸಿಕ ಪ್ರೇಮಕಥಾನಕವನ್ನು ಹೊಂದಿರುವ ‘ಬಾಜಿರಾವ್ ಮಸ್ತಾನಿ’ ಬಾಲಿವುಡ್ ಚಿತ್ರಕ್ಕಾಗಿ ಸಂಜಯ್‌ಲೀಲಾ ಬನ್ಸಾಲಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದಿದ್ದಾರೆ ಶ್ರೇಷ್ಠ ನಿರ್ದೇಶನದ ಜೊತೆಗೆ ‘ಬಾಜಿರಾವ್ ಮಸ್ತಾನಿ’ ಉತ್ತಮ ಪ್ರೊಡಕ್ಷನ್ ಡಿಸೈನ್ ಹಾಗೂ ಅತ್ಯುತ್ತಮ ಛಾಯಾಗ್ರಹಣ ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳನ್ನು ಪಡೆದಿದೆ.

ಸಲ್ಮಾನ್ ಖಾನ್ ಅಭಿನಯದ ಕಳೆದ ವರ್ಷದ ಸೂಪರ್ ಹಿಟ್ ಚಿತ್ರ ಬಜರಂಗಿ ಭಾಯ್‌ಜಾನ್, ಶ್ರೇಷ್ಠ ಮನರಂಜನಾತ್ಮಕ ಚಿತ್ರವೆನಿಸಿದೆ. ಆರುಷಿ ಕೊಲೆ ಪ್ರಕರಣ ಆಧಾರಿತ ತಲ್ವಾರ್‌ನ ಚಿತ್ರಕಥೆಗಾಗಿ ವಿಶಾಲ್ ಭಾರಧ್ವಾಜ್ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಮೂಲಚಿತ್ರಕಥೆ ಹಾಗೂ ಸಂಭಾಷಣೆ ಪ್ರಶಸ್ತಿಗಳನ್ನು ಜೂಹಿ ಚತುರ್ವೇದಿ (ಪಿಕು) ಹಾಗೂ ಹಿಮಾಂಶು ಶರ್ಮಾ (ತನು ವೆಡ್ಸ್ ಮನು ರಿಟರ್ನ್ಸ್) ಗಳಿಸಿದ್ದಾರೆ. ಎನ್. ರಮೇಶ್ ಶಿಪ್ಪಿ ನೇತೃತ್ವದ 11 ಮಂದಿ ತೀರ್ಪುಗಾರರ ತಂಡವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಸೋಮವಾರ ದಿಲ್ಲಿಯಲ್ಲಿ ಪ್ರಕಟಿಸಿತು.
 

ರಾಷ್ಟ್ರೀಯ ಭಾವೈಕ್ಯತೆಗಾಗಿನ ನರ್ಗೀಸ್ ದತ್ ಪ್ರಶಸ್ತಿ ಬಾಲಿವುಡ್‌ನ ನಾನಕ್ ಶಾ ಫಕೀರ್ ಚಿತ್ರಕ್ಕೆ ದೊರೆತಿದ್ದು, ಅತ್ಯುತ್ತಮ ವೇಷಭೂಷಣ ಪ್ರಶಸ್ತಿ ಕೂಡಾ ಅದರ ಪಾಲಾಗಿದೆ. ಗಲ್ಫ್ ಭಾರತೀಯರ ಬವಣೆಗಳ ಬಗ್ಗೆ ಬೆಳಕು ಚೆಲ್ಲುವ ಸಲೀಂ ಮುಹಮ್ಮದ್ ನಿರ್ದೇಶನದ ಪತ್ತೆಮಾರಿ, ಶ್ರೇಷ್ಠ ಮಲಯಾಳಂ ಚಿತ್ರ ಪ್ರಶಸ್ತಿಯನ್ನು ಪಡೆದಿದೆ. ಚಿತ್ರ ನಿರ್ಮಾಣವನ್ನು ಪ್ರೋತ್ಸಾಹಿಸಲು ವಿಶೇಷ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕಾಗಿ ಗುಜರಾತ್ ರಾಜ್ಯಕ್ಕೆ ಸಿನಿಮಾ ಸ್ನೇಹಿ ಪ್ರಶಸ್ತಿ ದೊರೆತಿದೆ.

ಉಳಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ವಿವರಗಳು ಹೀಗಿವೆ:

ಶ್ರೇಷ್ಠ ನೃತ್ಯನಿರ್ದೇಶನ: ರೆಮೊ ಡಿಸೋಜ ( ಬಾಜಿರಾವ್ ಮಸ್ತಾನಿ ಚಿತ್ರದ ದೀವಾನಿ ಮಸ್ತಾನಿ ಹಾಡಿನ ನೃತ್ಯ), ಅತ್ಯುತ್ತಮ ಹಿನ್ನೆಲೆ ಸಂಗೀತ : ಇಳಯ ರಾಜ (ತಾರೈ ತಾಪ್ಪಟ್ಟೈ), ಸಂಗೀತ ನಿರ್ದೇಶನ; ಎಂ. ಜಯಚಂದ್ರನ್ ( ಎನ್ನು ನಿಂಡೆೆ ಮೊದೀನ್ ಚಿತ್ರದ ಕಾದಿರುನ್ನು ಕಾದಿರುನ್ನ ಹಾಡು), ವಸ್ತ್ರ ವಿನ್ಯಾಸ ಹಾಗೂ ಪ್ರಸಾಧನ: ನಾನಕ್ ಶಾ ಫಕೀರ್, ಸಂಕಲನ: ದಿವಂಗತ ಕಿಶೋರ್ ಟಿ.ಇ. (ವಿಸಾರಣೈ), ಅತ್ಯುತ್ತಮ ಛಾಯಾಗ್ರಹಣ: ಸುದೀಪ್ ಚಟರ್ಜಿ (ಬಾಜಿರಾವ್ ಮಸ್ತಾನಿ), ಅತ್ಯುತ್ತಮ ಹಿನ್ನೆಲೆ ಗಾಯಕಿ: ಮೋನಾಲಿ ಠಾಕೂರ್ (ಮೊಹ್ ಮೊಹ್ ಕೆ ಧಾಗೆ), ಶ್ರೇಷ್ಠ ಪೋಷಕ ನಟಿ: ತನ್ವಿ ಆಝ್ಮಿ (ಬಾಜಿರಾವ್ ಮಸ್ತ್ತಾನಿ), ತೀರ್ಪುಗಾರರ ವಿಶೇಷ ಪ್ರಶಸ್ತಿ: ಜಯಸೂರ್ಯ (ಸು ಸು ಸುದಿ ವಾದ್ಮೀಕಂ ಹಾಗೂ ಲುಕ್ಕಾ ಚುಪ್ಪಿ), ವಿಶೇಷ ಪ್ರಶಸ್ತಿ: ರಿತಿಕಾ ಸಿಂಗ್ (ಇರುಡು ಸುಟ್ರು), ಶ್ರೇಷ್ಠ ಮಕ್ಕಳ ಚಿತ್ರ: ಡ್ಯುರೊಂಟೊ, ಪರಿಸರ ಸಂರಕ್ಷಣೆ ಕುರಿತ ಶ್ರೇಷ್ಠ ಚಿತ್ರ: ವಲಿಯ ಚಿರಕುಳ್ಳ ಪಕ್ಷಿಗಳ್, ಸಾಮಾಜಿಕ ವಿಷಯಗಳ ಕುರಿತ ಶ್ರೇಷ್ಠ ಚಿತ್ರ: ನಿರ್ಣಾಯಕಂ, ಉದಯೋನ್ಮುಖ ನಿರ್ದೇಶಕರಿಗಾಗಿನ ಇಂದಿರಾಗಾಂಧಿ ಪ್ರಶಸ್ತಿ : ನೀರಜ್ ಘಾಯ್‌ವಾನ್ (ಮಸಾನ್).

ಶ್ರೇಷ್ಠ ಪ್ರಾದೇಶಿಕ ಚಿತ್ರಗಳು:

ಹಿಂದಿ: ದಮ್ ಲಗಾಕೆ ಐಸಾ, ಬಂಗಾಳಿ: ಶಂಖಾಚಿಲ್, ಅಸ್ಸಾಮಿ:ಕೊದನೊಡಿ, ಕೊಂಕಣಿ:ಎನಿಮಿ,ತಮಿಳು:ವಿಸಾರಣೈ, ಮರಾಠಿ: ರಿಂಗಣ್, ಪಂಜಾಬಿ: ಚೌತಿ ಕೂಟ್, ಒಡಿಯಾ: ಪಹಡಾ ಲಾ ರುಹಾ,ತೆಲುಗು: ಕಾಂಚೆ, ಸಂಸ್ಕೃತ: ಪ್ರಿಯಮಾನಸಂ, ಖಾಸಿ: ಒನಾತಹ್, ಹರ್ಯಾಣವಿ: ಸಾತ್‌ರಂಗಿ, ವಾಂಚೊ: ದಿ ಹೆಡ್ ಹಂಟರ್.

ಬಿಗ್‌ಬಿಗೆ ನಾಲ್ಕನೆ ಪ್ರಶಸ್ತಿ, ಕಂಗನಾ ಹ್ಯಾಟ್ರಿಕ್

ಬಾಲಿವುಡ್‌ನ ಬಿಗ್ ಬಿ ಎಂದೇ ಖ್ಯಾತರಾದ ಅಮಿತಾಭ್‌ಗೆ ರಾಷ್ಟ್ರಪ್ರಶಸ್ತಿ ದೊರೆತಿರುವುದು ಇದು ನಾಲ್ಕನೆ ಸಲವಾಗಿದೆ. ಈ ಮೊದಲು ಅವರು ಅಗ್ನಿಪಥ್, ಬ್ಲಾಕ್ ಹಾಗೂ ಪಾ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News