ಲಾಹೋರ್ ಸ್ಫೋಟ: ಪಾಕ್ ಪ್ರಧಾನಿ ಅಮೆರಿಕ ಪ್ರವಾಸ ರದ್ದು
ಇಸ್ಲಾಮಾಬಾದ್, ಮಾ. 29: ಲಾಹೋರ್‌ನಲ್ಲಿ ಆದ ಭಯೋತ್ಪಾದಕ ದಾಳಿಯಿಂದಾಗಿ ವಿಚಲಿತರಾಗಿರುವ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ತನ್ನ ಮುಂದಿನ ಅಮೆರಿಕ ಪ್ರವಾಸವನ್ನು ರದ್ದುಪಡಿಸಿರುವುದಾಗಿ ವರದಿಗಳು ತಿಳಿಸಿವೆ.
ಈ ವಾರ ಅಮೆರಿಕದಲ್ಲಿ ಪರಮಾಣು ಸುರಕ್ಷ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಶರೀಫ್ ಮಾರ್ಚ್ 31ರಂದು ನಡೆಯಲಿರುವ ನಾಲ್ಕನೆ ಪರಮಾಣು ಸುರಕ್ಷ ಸಮ್ಮೇಳನದಲ್ಲಿ ಭಾಗವಹಿಸಲಿಕ್ಕಾಗಿ ವಾಶಿಂಗ್ಟನ್ ತೆರಳುವವರಿದ್ದರು.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸಮ್ಮೇಳನದ ನೇತೃತ್ವ ವಹಿಸಲಿರುವರು. ರೇಡಿಯೊ ಪಾಕಿಸ್ತಾನ್ ರಾಷ್ಟ್ರವನ್ನುದ್ದೇಶಿಸಿ ಶರೀಫ್ ಮಾತಾಡುವ ಸ್ವಲ್ಪ ಸಮಯ ಮೊದಲು ಟ್ವೀಟ್ ಮಾಡಿ ಪ್ರಧಾನಿ ನವಾಝ್ ಶರೀಪ್ ತನ್ನ ಮುಂದಿನ ಅಮೆರಿಕ ಪ್ರವಾಸ ರದ್ದು ಪಡಿಸಿರುವುದಾಗಿ ತಿಳಿಸಿತು. ಲಾಹೋರ್‌ನಲ್ಲಿ ರವಿವಾರ ಈಸ್ಟರ್‌ನಂದು ಗುಲ್ಶನ್ ಎ ಇಕ್ಬಾಲ್ ಪಾರ್ಕ್‌ನ ಸಮೀಪ ಬಾಂಬ್ ಸ್ಫೋಟದಲ್ಲಿ ಎಪ್ಪತ್ತೆರಡು ಮಂದಿ ಸಾವನ್ನಪ್ಪಿ, 233 ಮಂದಿ ಗಾಯಗೊಂಡಿದ್ದರು.
ತಹರೀಕೆ ತಾಲಿಬಾನ್ ಪಾಕಿಸ್ತಾನ್ ನ ಒಂದು ಗುಂಪು ಜಮಾಅತುಲ್ ಅಹ್ರಾರ್ ಇದರ ಹೊಣೆವಹಿಸಿಕೊಂಡಿದ್ದು ಕ್ರೈಸ್ತರು ತಮ್ಮ ಗುರಿಯಾಗಿತ್ತು ಎಂದು ಹೇಳಿಕೊಂಡಿದೆ.
ಎಕ್ಸ್‌ಪ್ರೆಸ್ ನ್ಯೂಸ್‌ನ ವರದಿಯ ಪ್ರಕಾರ ಪ್ರಧಾನಿ ವಿದೇಶಕ್ಕೆ ತನ್ನ ವಿಶೇಷ ದೂತರನ್ನು ಕಳುಹಿಸಲಿದ್ದಾರೆ. ಅವರು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿಯನ್ನು ಪ್ರತಿನಿಧಿಸಲಿದ್ದಾರೆ.
ಮಾಧ್ಯಮಗಳ ವರದಿಯ ಪ್ರಕಾರ ಸಮ್ಮೇಳನದಲ್ಲಿ ಶರೀಫ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯ ಭೇಟಿಯಾಗುವುದಿತ್ತು. ಇದಕ್ಕೂ ಮೊದಲು ಇಂದು ಬ್ರಿಟನ್ ಪ್ರಯಾಣ ಬೆಳೆಸಬೇಕಿತ್ತು. ಲಾಹೋರ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಈ ಪ್ರವಾಸವನ್ನೂ ರದ್ದುಗೊಳಿಸಿದ್ದಾರೆಂದು ವರದಿಯಾಗಿದೆ.