ಇದೆಂಥಾ ಆಶ್ಚರ್ಯ? ಈ ಬಾಲಕಿಯ ಉದ್ದ ಕಡಿಮೆಯಾಗುತ್ತಲೇ ಇದೆ!
ಹೊಸದಿಲ್ಲಿ, ಮಾರ್ಚ್. 29: ಜಾರ್ಖಂಡ್‌ನ ಚೇತರಾ ಜಿಲ್ಲೆಯ ಒಬ್ಬಳು ಬಾಲಕಿಗೆ ಆಶ್ಚರ್ಯಚಕಿತಗೊಳಿಸುವಂತಹ ರೋಗ ತಗುಲಿದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಅವಳ ಶರೀರದ ಉದ್ದ ಕಡಿಮೆಯಾಗುತ್ತಾ ಹೋಗುತ್ತಿರುವುದು ಈ ಹೊಸ ರೋಗದ ದುಷ್ಪರಿಣಾಮ! ಬಾಲಕಿ ಕುಂತಿ ಎಂಟು ವರ್ಷಗಳ ಮೊದಲು ಆರೋಗ್ಯಪೂರ್ಣವಾಗಿದ್ದಳು. ಆನಂತರ ಅವಳ ಕಾಲಲ್ಲಿ ಅಡಚಣೆಯುಂಟಾಗಿತ್ತು. ಮನೆಯವರು ಕುಂತಿಯನ್ನು ಚಿಕಿತ್ಸೆ ಕೊಡಿಸಲು ರಾಂಚಿಯ ಒಂದು ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ವೈದ್ಯರು ಆಪರೇಶನ್ ಮಾಡಿಸುವ ಸಲಹೆ ನೀಡಿದ್ದರು. 2007ರಲ್ಲಿ ಅವಳ ವಿಧವೆ ತಾಯಿಸಾಲಸೋಲ ಮಾಡಿ ಆಪರೇಶನ್ ಮಾಡಿಸಿದ್ದರು.
ಶಸ್ತ್ರಚಿಕಿತ್ಸೆಯ ಬಳಿಕ ಕುಂತಿಯ ಉದ್ದ ನಿರಂತರ ಕಡಿಮೆಗೊಳ್ಳತೊಡಗಿತು. ನಾಲ್ಕು ಅಡಿಯ ಕುಂತಿ ಈಗ ಎರಡು ಅಡಿಗೆ ತಲುಪಿದ್ದಾಳೆ. ಅವಳ ಕೈಕಾಲುಗಳು ಮಡಿಚಿಕೊಳ್ಳತೊಡಗಿದವು. ಅವಳೀಗ ಒಂದು ಜೀವಂತ ಶವದಂತಾಗಿದ್ದಾಳೆಂದು ವರದಿಗಳು ತಿಳಿಸಿವೆ. ವೈದ್ಯರಿಗೆ ಕುಂತಿಯ ಈ ರೋಗದ ಬಗ್ಗೆ ಏನೇನೂ ತಿಳಿದಿಲ್ಲ. ವೈದ್ಯರು ಈ ರೀತಿಯ ರೋಗ ಜಿಲ್ಲೆಯಲ್ಲಿ ಮೊದಲಬಾರಿ ಕಂಡು ಬಂದಿದೆ ಎಂದು ಹೇಳುತ್ತಿದ್ದಾರೆ. ಈಗ ಕುಂತಿಯ ತಾಯಿ ಅವಳನ್ನು ಎತ್ತಿಕೊಂಡು ಮನೆಮನೆ ಬಾಗಿಲನ್ನು ಬಡಿಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.