×
Ad

ಫಾ. ಉಳುನ್ನಲಿಲ್ ಜೀವಂತ: ಬಿಷಪ್ ಹಿಂಡರ್

Update: 2016-03-29 21:43 IST

 ಹೊಸದಿಲ್ಲಿ, ಮಾ.29: ಯೆಮನ್‌ನ ವೃದ್ಧಾಶ್ರಮವೊಂದರ ಮೇಲೆ ಈ ತಿಂಗಳಾರಂಭದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯೊಂದರ ವೇಳೆ ಐಸಿಸ್‌ನಿಂದ ಅಪಹರಿಸ್ಪಟ್ಟಿರುವ ಕೆಥೊಲಿಕ್ ಧರ್ಮಗುರು ಫಾ.ಥೋಮಸ್ ಉಳುನ್ನಲಿಲ್ ‘ಈಗಲೂ ಜೀವಂತವಾಗಿದ್ದಾರೆ’ ಎಂದು ಮಧ್ಯಪ್ರಾಚದ ಹಿರಿಯ ಬಿಷಪ್ ಒಬ್ಬರು ಮಂಗಳವಾರ ಹೇಳಿದ್ದಾರೆ.

ಉಳುನ್ನಲಿಲ್‌ರನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಶುಕ್ರವಾರ ಶಿಲುಬೆಗೇರಿಸಿದ್ದಾರೆಂದು ವಿಯೆನ್ನಾದ ಕಾರ್ಡಿನಲ್ ಕ್ರಿಸ್ತೋಫ್ ಸ್ಕೋನ್ ಬೋರ್ನ್‌ರನ್ನುಲ್ಲೇಖಿಸಿ, ಸೋಮವಾರ ಚರ್ಚ್‌ಗೆ ಸಂಬಂಧಿಸಿದ ಅನೇಕ ಸುದ್ದಿಪತ್ರಗಳಲ್ಲಿ ವರದಿಯಾಗಿತ್ತು.

ಆದರೆ, ಫಾ.ಟೋಮ್ ಉಳುನ್ನಲಿಲ್ ಈಗಲೂ ಜೀವಂತವಾಗಿದ್ದಾರೆನ್ನುವ ಕುರಿತು ತನಗೆ ಪ್ರಬಲ ಜೀವಂತವಾಗಿದ್ದಾರೆನ್ನುವ ಕುರಿತು ತನಗೆ ಪ್ರಬಲ ಸೂಚನೆಗಳು ಲಭಿಸಿವೆಯೆಂದು ಯುಎಇ, ಒಮಾನ್ ಹಾಗೂ ಯೆಮನ್‌ಗಳ ಕೆಥೊಲಿಕ್ ಚರ್ಚ್‌ಗ ಪ್ರಭಾರಿಯಾಗಿರುವ ಬಿಷಪ್ ಪೌಲ್ ಹಿಂಡರ್ :ಹಿಂದೂಸ್ಥಾನ್ ಟೈಂಸ್’ಗೆ ತಿಳಿಸಿದ್ದಾರೆ.

ಗುಡ್ ಫ್ರೈಡೆಯ ದಿನ ಅವರನ್ನು ಶಿಲುಬೆಗೇರಿಸಲಾಗಿದೆಯೆಂಬ ವದಂತಿ ಹರಡಿದೆ. ಆದರೆ, ಯಾರೂ ಅದಕ್ಕೆ ಪುರಾವೆ ನೀಡಿಲ್ಲ. ಮಾ.4ರಿಂದ ಅಪಹರಣಕಾರರ ವಶದಲ್ಲಿರುವ ಉಳುನ್ನಲಿಲ್‌ರ ಬಿಡುಗಡೆಯ ಪ್ರಯತ್ನದ ಕುರಿತು ಯಾವುದೇ ಮಾಹಿತಿಯನ್ನು ತಾನು ನೀಡಲಾರೆನೆಂದು ಹಿಂಡರ್ ಹೇಳಿದ್ದಾರೆ.

ಬೆಂಗಳೂರಿನ ಆರ್ಚ್ ಬಿಷಪ್ ಮೊರಾಸ್‌ರ ‘ತಪ್ಪು ಹೇಳಿಕೆಯ’ ಆಧಾರದಲ್ಲಿ ನೀಡಿದ್ದ ತನ್ನ ಹೇಳಿಕೆಯನ್ನು ಕಾರ್ಡಿನಲ್ ಸ್ಕೋನ್‌ಬೋರ್ನ್ ತಿದ್ದಿದ್ದರೆಂದು ಹಿಂಡರ್ ಈ ಮೊದಲು ಕೆಥೊಲಿಕ್ ನ್ಯೂಸ್ ಏಜೆನ್ಸಿಗೆ ತಿಳಿಸಿದರು.

ಕ್ರೈಸ್ತ ಗುರುವನ್ನು ಶಿಲುಬೆಗೇರುಸಿರುವ ವರದಿಗಳ ಬಗ್ಗೆ ‘ಸ್ವತಂತ್ರ ದೃಢೀಕರಣವಿಲ್ಲವೆಂದು’ ವಿದೇಶಾಂಗ ಸಚಿವಾಲಯ ಸೋಮವಾರ ಹೇಳಿತ್ತು.

ಉಳುನ್ನಲಿಲ್ (55) ಕೇರಳದ ಕೊಟ್ಟಾಯಂ ಜಿಲ್ಲೆಯ ರಾಮಪುರಂ ಗ್ರಾಮದವರು. ಮಾರ್ಚ್ 4ರಂದು ಶಂಕಿತ ಐಸಿಸ್ ಭಯೋತ್ಪಾದಕರು ಯೆಮನ್‌ನ ಬಂದರು ನಗೆ ಏಡನ್‌ನ ವೃದ್ಧಾಶ್ರಮವೊಂದಕ್ಕೆ ದಾಳಿ ನಡೆಸಿ, ಒಬ್ಬರು ಭಾರತೀಯ ಕ್ರೈಸ್ತ ಸನ್ಯಾಸಿನಿ ಸಹಿತ 16 ಮಂದಿಯನ್ನು ಗುಂಡಿಕ್ಕಿ ಕೊಂದಿದ್ದರು ಹಾಗೂ ಉಝುನ್ನಲಿಲ್‌ರನ್ನು ಅಪಹರಿಸಿದ್ದರು.

ಆ ವೃದ್ಧಾಶ್ರಮವನ್ನು ಮದರ್ ಥೆರೆಸಾರ ಮಿಶನ್ ಆಫ್ ಚಾರಿಟಿ ನಡೆಸುತ್ತಿದೆ.

ಕ್ರೈಸ್ತ ಗುರುವಿನ ಬಿಡುಗಡೆಗಾಗಿ ಸರಕಾರ ಎಲ್ಲ ಪ್ರಯತ್ನವನ್ನು ಮಾಡುತ್ತಿದೆಯೆಂದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಶನಿವಾರ ಹೇಳಿದ್ದರು.

ಉಳುನ್ನಲಿಲ್‌ರಿಗೆ ಚಿತ್ರ ಹಿಂಸೆ ನೀಡಲಾಗುತ್ತಿದೆ. ಅವರನ್ನು ಏಸುಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವಾದ ಶುಕ್ರವಾರ ಶಿಲುಬೆಗೇರಿಸಲಿದ್ದಾರೆಂದು ತಮಗೆ ವರದಿಗಳು ಬಂದಿವೆಯೆಂದು ಹಲವು ಕ್ರೈಸ್ತ ಗುಂಪುಗಳು ಪ್ರತಿಪಾದಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News