‘ಉಗ್ರ’ ಯುದ್ಧದಲ್ಲಿ ಮೋದಿ ಮುಖ್ಯ ಭಾಗೀದಾರ

Update: 2016-03-30 15:09 GMT

ಬ್ರಸೆಲ್ಸ್, ಮಾ. 30: ಭಯೋತ್ಪಾದನೆ ವಿರುದ್ಧದ ಜಾಗತಿಕ ಯುದ್ಧದಲ್ಲಿ ಪ್ರಧಾನಿ ನರೇಂದ್ರ ಮೋದಿ ಐರೋಪ್ಯ ಒಕ್ಕೂಟದ ‘‘ಮಹತ್ವದ ಭಾಗೀದಾರ’’ನಾಗಬಹುದು ಎಂದು ಐರೋಪ್ಯ ಸಂಸತ್ತಿನ ಪ್ರಮುಖ ಸದಸ್ಯರು ಇಂದು ಹೇಳಿದ್ದಾರೆ.

ಇಂಥ ವಿಷಯಗಳನ್ನು ನಿಭಾಯಿಸುವಲ್ಲಿ ಭಾರತಕ್ಕೆ ‘‘ನೇರ ಅನುಭವ’’ವಿರುವುದರಿಂದ ಅದು ಈ ಸಮರದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಎಂದು ಅವರು ಬಯಸಿದರು.

ಭಾರತ-ಐರೋಪ್ಯ ಒಕ್ಕೂಟ ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಬ್ರೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ಗೆ ಬುಧವಾರ ಬಂದಿಳಿದ ಮೋದಿಯನ್ನು ಸ್ವಾಗತಿಸಿದ ಸದಸ್ಯರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

‘‘ಭಾರತೀಯ ರಾಜಕೀಯ ನಕಾಶೆಯ ಅತ್ಯಂತ ಮಹತ್ವದ ವ್ಯಕ್ತಿ ಮೋದಿ’’ ಎಂಬುದಾಗಿ ಅವರು ಬಣ್ಣಿಸಿದರು.

‘‘ಭಯೋತ್ಪಾದನೆ ವಿರುದ್ಧದ ಜಾಗತಿಕ ಸಮರದಲ್ಲಿ ಮೋದಿ ಐರೋಪ್ಯ ಒಕ್ಕೂಟದ ಮಹತ್ವದ ಭಾಗೀದಾರನಾಗಬಹುದು ಎಂಬುದಾಗಿ ಐರೋಪ್ಯ ಸಂಸತ್ತು ಭಾವಿಸುತ್ತದೆ’’ ಎಂದು ಇಲ್ಲಿನ ಹೊಟೇಲೊಂದರಲ್ಲಿ ಮೋದಿಯನ್ನು ಭೇಟಿಯಾದ ಬಳಿಕ ಹೇಳಿಕೆಯೊಂದನ್ನು ನೀಡಿದ ಅವರು ತಿಳಿಸಿದರು.

‘‘ಭಯೋತ್ಪಾದನೆಯೊಂದಿಗೆ ವ್ಯವಹರಿಸುವಲ್ಲಿ ಭಾರತಕ್ಕೆ ನೇರ ಅನುಭವವಿದೆ. ಹಾಗಾಗಿ, ಈ ವಿಷಯದಲ್ಲಿ ಐರೋಪ್ಯ ಒಕ್ಕೂಟ ಭಾರತದಿಂದ ತುಂಬಾ ಕಲಿಯಬಹುದಾಗಿದೆ’’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

‘‘ಪ್ರಧಾನಿ ನೇತೃತ್ವದ ಭಾರತೀಯ ನೀತಿ ನಿರೂಪಕರೊಂದಿಗೆ ಐರೋಪ್ಯ ಒಕ್ಕೂಟ ನಿರಂತರವಾಗಿ ಮಾತುಕತೆ ನಡೆಸಬೇಕು. ಮಾತುಕತೆಯ ವೇಳೆ ಪರಸ್ಪರ ಆಸಕ್ತಿಯ ವಿಷಯಗಳಾದ ಸಾಗರ ತೀರ ಭದ್ರತೆ, ಭಯೋತ್ಪಾದನೆ, ಬಾಹ್ಯಾಕಾಶ ಮತ್ತು ಸೈಬರ್ ಅಪರಾಧ ಮುಂತಾದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಬೇಕು’’.

ತನ್ನ ಮೂರು ದೇಶಗಳ ನಾಲ್ಕು ದಿನಗಳ ಪ್ರವಾಸದ ಮೊದಲ ಚರಣದಲ್ಲಿ ಮೋದಿ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ತಲುಪಿದರು. ಮುಂದಿನ ಚರಣಗಳಲ್ಲಿ ಅವರು ಅಮೆರಿಕ ಮತ್ತು ಸೌದಿ ಅರೇಬಿಯಗಳಿಗೆ ಭೇಟಿ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News