ಪರಮಾಣು ಶಕ್ತ ಪಾಕಿಸ್ತಾನ ಬೃಹತ್ ಸಮಸ್ಯೆ: ಟ್ರಂಪ್

Update: 2016-03-30 16:36 GMT

ವಾಶಿಂಗ್ಟನ್, ಮಾ. 30: ಪರಮಾಣು ಶಕ್ತ ಪಾಕಿಸ್ತಾನ ‘‘ಅತ್ಯಂತ ದೊಡ್ಡ ಸಮಸ್ಯೆ’’ಯಾಗಿದೆ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘‘ಪಾಕಿಸ್ತಾನ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ ಹಾಗೂ ನಮಗೆ ಅತ್ಯಂತ ಮಹತ್ವದ ದೇಶವೂ ಆಗಿದೆ. ಯಾಕೆಂದರೆ, ಅವರಲ್ಲಿ ಪರಮಾಣು ಅಸ್ತ್ರಗಳಿವೆ. ತಮ್ಮ ಪರಮಾಣು ಅಸ್ತ್ರಗಳ ಮೇಲೆ ಅವರಿಗೆ ನಿಯಂತ್ರಣ ಇರಬೇಕಾಗಿದೆ’’ ಎಂದು ವಿಸ್‌ಕೋನ್ಸಿನ್‌ನಲ್ಲಿ ಸಿಎನ್‌ಎನ್ ಜೊತೆಗೆ ಮಾತನಾಡಿದ ಟ್ರಂಪ್ ನುಡಿದರು. ಇಲ್ಲಿ ಎಪ್ರಿಲ್ 5ರಂದು ಅಧ್ಯಕ್ಷೀಯ ಪ್ರೈಮರಿ ನಡೆಯಲಿದೆ.

‘‘ಉದ್ಯಾನವೊಂದರಲ್ಲಿ ನಡೆದ ಹತ್ಯಾಕಾಂಡದಲ್ಲಿ ಹೆಚ್ಚಾಗಿ ಕ್ರೈಸ್ತರೇ ಮೃತಪಟ್ಟರು. ಇತರರು ಕೂಡ ಮೃತಪಟ್ಟಿದ್ದಾರೆ. ಇದನ್ನೆಲ್ಲ ನೋಡಿದಾಗ, ಇದೊಂದು ಭಯಾನಕ ಕತೆಯೆಂಬಂತೆ ಕಾಣುತ್ತದೆ’’ ಎಂದರು.

ಈಸ್ಟರ್ ಸಂಡೆಯ ದಿನ ಲಾಹೋರ್‌ನಲ್ಲಿ ನಡೆದ ಭೀಕರ ಆತ್ಮಹತ್ಯಾ ದಾಳಿಯ ಬಗ್ಗೆ ಅವರು ಪ್ರಸ್ತಾಪಿಸುತ್ತಿದ್ದರು. ದಾಳಿಯಲ್ಲಿ 74 ಮಂದಿ ಮೃತಪಟ್ಟಿದ್ದಾರೆ ಹಾಗೂ 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಮಹಿಳೆಯೊಂದಿಗೆ ಅಸಭ್ಯ ವರ್ತನೆ: ಟ್ರಂಪ್ ಸಹಾಯಕ ಸೆರೆ

ಪತ್ರಕರ್ತೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಡೊನಾಲ್ಡ್ ಟ್ರಂಪ್‌ರ ಪ್ರಚಾರ ವ್ಯವಸ್ಥಾಪಕ ಕೋರಿ ಲೆವಂಡೊವ್‌ಸ್ಕಿಯನ್ನು ಫ್ಲೋರಿಡದಲ್ಲಿ ಮಂಗಳವಾರ ಬಂಧಿಸಲಾಗಿದೆ.

‘ಬ್ರೇಟ್‌ಬಾರ್ಟ್’ ವಾರ್ತಾಸಂಸ್ಥೆಯ ವರದಿಗಾರ್ತಿಯಾಗಿದ್ದ ಮಿಶೆಲ್ ಫೀಲ್ಡ್ಸ್ ಮಾರ್ಚ್ 8ರಂದು ಪ್ರಚಾರ ಸಭೆಯೊಂದರಲ್ಲಿ ಟ್ರಂಪ್‌ಗೆ ಪ್ರಶ್ನೆಯೊಂದನ್ನು ಕೇಳಲು ಮುಂದಾದಾಗ ಲೆವಂಡೊವ್‌ಸ್ಕಿ ಆಕೆಯ ಕೈಹಿಡಿದು ಜಗ್ಗಿದ ಎಂದು ಆರೋಪಿಸಲಾಗಿದೆ. ಇದರಿಂದ ಪತ್ರಕರ್ತೆಯ ಕೈಗೆ ತರಚು ಗಾಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News