ಜಮ್ಮು-ಕಾಶ್ಮೀರ: ಸಮಾನ ಅಧಿಕಾರ ಹಂಚಿಕೆಗೆ ಬಿಜೆಪಿ ಪಟ್ಟು
ಶ್ರೀನಗರ, ಮಾ.30: ಜಮ್ಮು- ಕಾಶ್ಮೀರದಲ್ಲಿ ಸರ್ಕಾರ ರಚನೆ ಸಂಬಂಧ ಚರ್ಚಿಸಲು ಜಮ್ಮುವಿನಲ್ಲಿ ಬುಧವಾರ ಸಬೆ ಸೇರಿದ್ದ ಬಿಜೆಪಿ ಕೋರ್ ಕಮಿಟಿ, ರಾಜ್ಯದಲ್ಲಿ ಸಮಾನ ಅಧಿಕಾರ ಹಂಚಿಕೆಯ ಬೇಡಿಕೆಯನ್ನು ಮುಂದಿಟ್ಟಿದೆ.
ಪಿಡಿಪಿ ಶಾಸಕರಷ್ಟೇ ಸಂಖ್ಯೆಯ ಶಾಸಕರನ್ನು ನಾವು ಕೂಡಾ ಹೊಂದಿದ್ದೇವೆ. ಅದ್ದರಿಂದ ಅವರಷ್ಟೇ ಅಧಿಕಾರವನ್ನು ನಾವೂ ನಿರೀಕ್ಷಿಸುವುದು ತಪ್ಪಲ್ಲ. ಪ್ರಾತಿನಿಧ್ಯ ಸಮಾನವಾಗಿರಬೇಕು. ಪಕ್ಷದ ಹೈಕಮಾಂಡ್ ಈ ವಿಚಾರದಲ್ಲಿ ಸಂಧಾನ ಮಾತುಕತೆ ನಡೆಸುತ್ತಿದೆ. ಅಧಿಕಾರದಲ್ಲಿ ಸಮಪಾಲು ನಮಗೆ ಬೇಕು. ಜನ ಇದನ್ನು ನ್ಯಾಯಬದ್ಧ ಎಂದು ಹೇಳಬೇಕು ಎಂದು ಸದಸ್ಯ ಸುನೀಲ್ ಸೇಥಿ ಮಾಧ್ಯಮಗಳಿಗೆ ವಿವರಿಸಿದರು.
ಮತ್ತೊಬ್ಬ ಸದಸ್ಯ ಗಗನ್ ಗತ್ ಹೇಳಿಕೆ ನೀಡಿ, ಬಿಜೆಪಿ ಕೇವಲ ಜಮ್ಮು ಕಾಶ್ಮೀರವನ್ನು ಮಾತ್ರ ಆಳುತ್ತಿಲ್ಲ. ಇಡೀ ದೇಶದ ಆಡಳಿತ ನಡೆಸುತ್ತಿದೆ. ಖಾತೆಗಳ ಹಂಚಿಕೆ ಕೂಡಾ ಪ್ರಮುಖ ವಿಚಾರ ಎಂದು ಹೇಳಿದ್ದಾರೆ. ನಾವು ಪಿಡಿಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಜಮ್ಮು ಜನತೆ ಕೂಡಾ ಅರ್ಹವಾದ ಪಾಲು ಪಡೆಯಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಸರ್ಕಾರದಲ್ಲಿ 11 ಖಾತೆಗಳು ಪಿಡಿಪಿ ವಶದಲ್ಲಿದ್ದರೆ ಏಳು ಬಿಜೆಪಿಗೆ ದಕ್ಕಿದ್ದವು. ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಏಪ್ರಿಲ್ 4ರಂದು ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆ ಇದೆ.
ಈ ಮುನ್ನ ಮೆಹಬೂಬಾ ರಾಜ್ಯಪಾಲ ಎನ್.ಎನ್.ವೋಹ್ರಾ ಅವರನ್ನು ಬೇಟಿ ಮಾಡಿ 25 ಮಂದಿ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಸರ್ಕಾರ ರಚನೆಯ ಹಕ್ಕು ಪ್ರತಿಪಾದಿಸಿದರು. 87 ಸದಸ್ಯಬಲದ ವಿಧಾನಸಬೆಯಲ್ಲಿ ಪಿಡಿಪಿಗೆ ಸೇರಿದ 27 ಮಂದಿ ಶಾಸಕರಿದ್ದಾರೆ.