×
Ad

ಮೂರನೆ ಕ್ಲಾಸೂ ಕಲಿಯದ ಈ ಕವಿಯ ಮೇಲೆ 5 ಪಿಎಚ್‌ಡಿ ಪ್ರಬಂಧಗಳು!

Update: 2016-03-30 22:45 IST

ಹೊಸದಿಲ್ಲಿ, ಮಾ.30: ಆತ ಶಾಲೆಗೆ ಎರಡು-ಮೂರು ವರ್ಷವಷ್ಟೇ ಹೋಗಿದ್ದಾರೆ. ಆದರೆ, ಅವರ ಬರಹಗಳು ಹಾಗೂ ಕವಿತೆಗಳ ಮೇಲೆ ಐವರು ವಿದ್ವಾಂಸರು ಸಂಶೋಧನೆ ನಡೆಸಿ ಪಿಎಚ್‌ಡಿ ಪಡೆದಿದ್ದಾರೆ. ಪಶ್ಚಿಮ ಒಡಿಶಾದ ಈ ವ್ಯಕ್ತಿಗೆ ರಾಷ್ಟ್ರಪತಿ ಸೋಮವಾರ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನಿಸಿದ್ದಾರೆ.

ಹಲಧರ ನಾಗ್ ಎಂಬ 66ರ ಹರೆಯದ ಈ ಕೋಸಲಿ ಭಾಷೆಯ ಕವಿ, ತಾನು ಬರೆದ ಕವಿತೆಗಳು ಹಾಗೂ 20 ಬರಹಗಳನ್ನು ನೆನಪಿರಿಸಿಕೊಂಡಿದ್ದಾರೆ. ಸಂಭಲ್ಪುರ ವಿವಿ ಈಗ ಅವರ ಬರಹಗಳ ಸಂಕಲನ-ಹಲಧರ ಗ್ರಂಥಾಬಲಿ-2ನ್ನು ಹೊರ ತರಲಿದ್ದು, ಅದು ವಿವಿಯ ಪಠ್ಯದ ಭಾಗವಾಗಲಿದೆ.
‘‘ಅವರು ತಾನು ಬರೆದುದನ್ನೆಲ್ಲ ಜ್ಞಾಪಕದಲ್ಲಿರಿಸಿದ್ದಾರೆ ಹಾಗೂ ಹೇಳುತ್ತಾರೆ. ನೀವು ಕೇವಲ ಹೆಸರು ಅಥವಾ ವಿಷಯವನ್ನು ತಿಳಿಸಿದರೆ ಸಾಕು. ಅವರೆಂದೂ ಯಾವುದನ್ನೂ ತಪ್ಪುವುದಿಲ್ಲ. ಅವರೀಗ ತನ್ನ ಕವಿತೆಗಳನ್ನು ಹಾಡಲು ಪ್ರತಿ ದಿನ ಕನಿಷ್ಠ 3-4 ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ’’ ಎಂದು ಕವಿಯ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ.
 ಯುವ ಜನರಿಗೆ ಕೋಸಲಿ ಕವಿತೆಗಳಲ್ಲಿ ಆಸಕ್ತಿಯಿರುವುದನ್ನು ನೋಡುವಾಗ ಹೆಮ್ಮೆಯೆನಿಸುತ್ತದೆ. ಪ್ರತಿಯೊಬ್ಬನೂ ಕವಿಯೇ. ಆದರೆ, ಕೆಲವರಿಗಷ್ಟೇ ಅವುಗಳಿಗೆ ರೂಪ ನೀಡುವ ಕಲೆ ಕರಗತವಾಗಿರುತ್ತದೆಯೆಂದು ಹಲಧರ್ ಟಿಒಐಗೆ ಹೇಳಿದ್ದಾರೆ.
ನಾಗ್, ಎಂದೂ ಪಾದರಕ್ಷೆ ಧರಿಸಿದವರಲ್ಲ. ಅವರು ಸದಾ ಬಿಳಿ ಧೋತಿ ಹಾಗೂ ಮೇಲಂಗಿ ಧರಿಸುತ್ತಾರೆ.
1950ರಲ್ಲಿ ಒಡಿಶಾದ ಬಾರ್ಗಡ ಜಿಲ್ಲೆಯ ೆನ್ಸ್‌ನ ಬಡ ಕುಟುಂಬವೊಂದರಲ್ಲಿ ಜನಿಸಿದ ಹಲಧರ್, ಕೇವಲ 3ನೆ ದರ್ಜೆಯ ವರೆಗಷ್ಟೇ ಶಾಲೆಗೆ ಹೋಗಿದ್ದಾರೆ. 10 ವರ್ಷದವರಿದ್ದಾಗ, ತಂದೆ ನಿಧನರಾದ ಬಳಿಕ ಅವರು ಶಾಲೆಯನ್ನು ಅರ್ಧಕ್ಕೇ ತೊರೆದಿದ್ದರು. ವಿಧವೆಯೊಬ್ಬಳ ಮಗನ ಜೀವನ ಬಲು ಕಠಿಣ ಎಂದ ನಾಗ್, ತಾನು ಗತ್ಯಂತರವಿಲ್ಲದೆ ಸ್ಥಳೀಯ ಸಿಹಿತಿಂಡಿ ಅಂಗಡಿಯೊಂದರಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡಿದ್ದುದನ್ನು ನೆನಪಿಸಿಕೊಳ್ಳುತ್ತಾರೆ.
2 ವರ್ಷಗಳ ಬಳಿಕ ಗ್ರಾಮದ ಮುಖ್ಯಸ್ಥನೊಬ್ಬ ನಾಗ್‌ರನ್ನು ಪ್ರೌಢಶಾಲೆಯೊಂದಕ್ಕೆ ಕರೆದೊಯ್ದನು. ಅಲ್ಲಿ ಅವರು 16 ವರ್ಷಗಳ ಕಾಲ ಅಡುಗೆಯಾಳಾಗಿ ದುಡಿದರು.
ಆ ವೇಳೆ, ಪ್ರದೇಶದಲ್ಲಿ ಶೀಘ್ರವೇ ಅನೇಕ ಶಾಲೆಗಳು ಆರಂಭಗೊಂಡವು. ತಾನು ಬ್ಯಾಂಕರ್ ಒಬ್ಬನಿಂದ ರೂ. 1 ಸಾವಿರ ಸಾಲ ಪಡೆದು ಶಾಲಾ ವಿದ್ಯಾರ್ಥಿಗಳ ಪುಸ್ತಕ, ತಿಂಡಿ ತಿನಿಸುಗಳ ಸಣ್ಣ ಅಂಗಡಿಯೊಂದನ್ನು ಆರಂಭಿಸಿದೆನೆಂದು ಅವರು ಹೇಳಿದ್ದಾರೆ.
ಈ ಅವಧಿಯಲ್ಲೇ-1990ರಲ್ಲಿ -ಹಲಧರ್, ಮೊದಲ ಕವನ ‘ಧೋಡೊ ಬರ್ಗಛ್(ಹಳೆಯ ಆಲದ ಮರ) ಬರೆದು. ಅದು ಸ್ಥಳೀಯ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅವರು ನಿಯತಕಾಲಿಕೆಗೆ 4 ಕವನಗಳನ್ನು ಕಳುಹಿಸಿದರು. ಅವೆಲ್ಲವೂ ಪ್ರಕಟವಾದವು.
ತನ್ನನ್ನು ಸನ್ಮಾನಿಸಲಾಯಿತು. ಅದು ತನಗೆ ಹೆಚ್ಚು ಹೆಚ್ಚು ಬರೆಯಲು ಸ್ಫೂರ್ತಿ ನೀಡಿತು. ತಾನು ಹತ್ತಿರದ ಊರುಗಳಲ್ಲಿ ಸಂಚರಿಸಿ ತನ್ನ ಕವಿತೆಗಳನ್ನು ಓದಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತೆಂದು ಒಡಿಶಾದಲ್ಲಿ ಲೋಕ ಕವಿರತ್ನ ಎಂದೇ ಖ್ಯಾತರಾಗಿರುವ ನಾಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News