×
Ad

ಅಸ್ಸಾಂನ ಚಹಾ ಕಾರ್ಮಿಕರ ಬಗ್ಗೆ ಮೋದಿಗೆ ಏನೂ ತಿಳಿದಿಲ್ಲ: ಸೋನಿಯಾ

Update: 2016-03-30 22:46 IST

ಗುವಾಹತಿ, ಮಾ.30: ತಾನೂ ಒಮ್ಮೆ ಅಸ್ಸಾಂನ ಚಹಾ ಮಾರಿದ್ದೇನೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಕೆಲವೇ ದಿನಗಳಲ್ಲಿ ಅವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮೋದಿಯವರಿಗೆ ಅಸ್ಸಾಂನ ಚಹಾ ತೋಟಗಳ ಕೆಲಸಗಾರರ ಬಗ್ಗೆ ಏನೂ ತಿಳಿದಿಲ್ಲ ಎಂದಿದ್ದಾರೆ.

ಮೋದಿ, ಚಹಾ ಕಾರ್ಮಿಕರನ್ನು ಶ್ಲಾಘಿಸಿದ್ದಾರೆ. ಆದರೆ, ಅವರ ವಾಸ್ತವ ಸ್ಥಿತಿಯ ಬಗ್ಗೆ ಪ್ರಧಾನಿಗೆ ಏನೂ ತಿಳಿದಿಲ್ಲವೆಂದು ಸದ್ಯವೇ ಚುನಾವಣೆ ನಡೆಯಲಿರುವ ಅಸ್ಸಾಂನ ಶಿವಸಾಗರದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಸೋನಿಯಾ ಹೇಳಿದ್ದಾರೆ.
ಚಹಾ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸಿ, ಅದನ್ನು ಸಾಧಿಸಿದುದು ಕಾಂಗ್ರೆಸ್ ಹಾಗೂ ಅದರ 3ಬಾರಿಯ ಮುಖ್ಯಮಂತ್ರಿ ತರುಣ್ ಗೊಗೊಯ್ ಎಂದು ಪ್ರತಿಪಾದಿಸಿದ ಅವರು, ಅಸ್ಸಾಂನ ಕುರಿತು ಮೋದಿ ಸರಕಾರ ಹೇಗೆ ನಡೆದುಕೊಂಡಿದೆಯೆಂಬುದು ಎಲ್ಲರಿಗೂ ತಿಳಿದಿದೆಯೆಂದು ಆರೋಪಿಸಿದ್ದಾರೆ.
ಅಸ್ಸಾಂ ನೆರೆಯೊಂದಿಗೆ ಹೋರಾಡುತ್ತಿದ್ದಾಗ ಮೋದಿ ಆಹಾರ ನೀಡಲು ನಿರಾಕರಿಸಿದ್ದರು. ನಾಗಾ ಒಪ್ಪಂದದಿಂದ ಬಾಧಿತವಾಗುವ ರಾಜ್ಯಗಳೊಂದಿಗೆ ಅವರು ಸಮಾಲೋಚನೆ ನಡೆಸಿದರು ಹಾಗೂ ಯುಪಿಎ ಸರಕಾರವು ಅಸ್ಸಾಂಗೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದರೆಂದು ಸೋನಿಯಾ ದೂರಿದ್ದಾರೆ.
ಗೊಗೊಯ್‌ಯವರ ವಯಸ್ಸಿಗೆ ಸಂಬಂಧಿಸಿ ಮೋದಿ ಮಾಡಿದ್ದ ಟೀಕೆಗೆ ತಿರುಗೇಟು ನೀಡಿದ ಅವರು, ಅಸ್ಸಾಂನ ಜನರು ಹಾಗೂ ಗೊಗೊಯ್‌ಯವರನ್ನು ಅವರೇಕೆ ಅವಮಾನಿಸುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ.
ಕಳೆದ ವಾರ, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಸರ್ವಾನಂದ ಸೋನೋವಾಲ್ ಪರ ಪ್ರಚಾರ ನಡೆಸಿದ್ದ ಮೋದಿ, ಗೊಗೊಯ್‌ಗೆ 90ರ ಹರೆಯ. ಅಸ್ಸಾಂಗೆ ಯುವ ಹಾಗೂ ಹೆಚ್ಚು ಶಕ್ತಿಶಾಲಿ ನಾಯಕ ಬೇಕಾಗಿದ್ದಾರೆಂದು ಎರಡು ಸಂದರ್ಭಗಳಲ್ಲಿ ಹೇಳಿದ್ದರು.
ಮುಖ್ಯಮಂತ್ರಿ ಗೊಗೊಯ್‌ಯವರ ಸಾಧನೆಯನ್ನು ಜನರಿಗೆ ನೆನಪಿಸಿದ ಸೋನಿಯಾ, ಈ ಮೊದಲು ಅಸ್ಸಾಂ ಬಂಡುಕೋರತನ ಹಾಗೂ ಹಿಂಸಾಚಾರಕ್ಕೆ ಹೆಸರಾಗಿತ್ತು. ಗೊಗೊಯ್‌ಯವರ ಆಡಳಿತದಲ್ಲಿ ಅಸ್ಸಾಂ, ಪ್ರಗತಿಪರ ರಾಜ್ಯವಾಗಿ ಮೂಡಿ ಬಂದಿದೆ ಎಂದಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News