ವಿವಾದಿತ ಹೇಳಿಕೆಗೆ ಕನ್ಹಯ್ಯ ಸ್ಪಷ್ಟನೆ
ಹೊಸದಿಲ್ಲಿ,ಮಾ.30: 1984ರ ಸಿಖ್ ವಿರೋಧಿ ಗಲಭೆ ಹಾಗೂ 2002ರ ಗುಜರಾತ್ ಕೋಮುಗಲಭೆ, ಇವೆರಡೂ ಸರಕಾರಿ ಪ್ರಾಯೋಜಿತ ಹತ್ಯಾಕಾಂಡಗಳಾಗಿದ್ದು, ಅವುಗಳ ಸಂತ್ರಸ್ತರಿಗೆ ನ್ಯಾಯ ಇನ್ನೂ ದೊರೆತಿಲ್ಲವೆಂದು ಕನ್ಹಯ್ಯಾ ಕುಮಾರ್ ಹೇಳಿದ್ದಾರೆ.
1984ರ ಇಂದಿರಾಗಾಂಧಿ ಹತ್ಯೆಯ ಬಳಿಕ ನಡೆದ ಸಿಖ್ ವಿರೋಧಿ ಗಲಭೆ ಹಾಗೂ 2002ರ ಗುಜರಾತ್ ಕೋಮುಗಲಭೆಗೂ ಪರಸ್ಪರ ಹೋಲಿಕೆ ಮಾಡಲು ಸಾಧ್ಯವಿಲ್ಲವೆಂದು ತಾನು ನೀಡಿದ್ದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯ್ಯಾಕುಮಾರ್ ಈ ಸ್ಪಷ್ಟನೆ ನೀಡಿದ್ದಾರೆ.
ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಜಶ್ನ್ ಎ ಅಜಾದಿ ಕಾರ್ಯಕ್ರಮದಲ್ಲಿ ನಡೆದ ‘ಆಝಾದಿಯ ಧ್ವನಿಗಳು’ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು ತುರ್ತು ಪರಿಸ್ಥಿತಿಗೂ, ಫ್ಯಾಶಿಸಂಗೂ ವ್ಯತ್ಯಾಸವಿದೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಕೇವಲ ಒಂದು ಪಕ್ಷದ ಗೂಂಡಾಗಳು ಗೂಂಡಾಗಿರಿಯಲ್ಲಿ ತೊಡಗುತ್ತಾರೆ. ಆದರೆ ಫ್ಯಾಶಿಸಂನಲ್ಲಿ ಇಡೀ ಆಡಳಿತ ಯಂತ್ರವು ಗೂಂಡಾಗಿರಿಯಲ್ಲಿ ನಿರತವಾಗುತ್ತದೆ ಎಂದು ಹೇಳಿದ್ದರು.
ಕನ್ಹಯ್ಯ ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.