ನೇತಾಜಿಯವರ ಇನ್ನೂ 50 ಕಡತ ಬಿಡುಗಡೆ
ಹೊಸದಿಲ್ಲಿ, ಮಾ.30: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವಂತೆಯೇ, ಕೇಂದ್ರ ಸಂಸ್ಕೃತಿ ಸಹಾಯಕ ಸಚಿವ ಮಹೇಶ್ ಶರ್ಮಾ, ನೇತಾಜಿ ಸುಭಾಶ್ಚಂದ್ರ ಬೋಸರಿಗೆ ಸಂಬಂಧಿಸಿದ 50 ಅವರ್ಗೀಕೃತ ಕಡತಗಳ 2ನೆ ಕಂತನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ, ಈ ಕ್ರಮವು ರಾಜಕೀಯದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲವೆಂದು ಅವರು ಸ್ಪಷ್ಪಪಡಿಸಿದ್ದಾರೆ.
ಈ 50 ಕಡತಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಪ್ರಧಾನಿ ಕಚೇರಿ ಹಾಗೂ ಗೃಹ ಸಚಿವಾಲಯದಲ್ಲಿದ್ದ ತಲಾ 10 ಹಾಗೂ ವಿದೇಶಾಂಗ ಸಚಿವಾಲಯದಲ್ಲಿದ್ದ 30 ಕಡತಗಳು ಇವಿಗಳಲ್ಲಿ ಸೇರಿವೆ. ಇವು 1956ರಿಂದ 2009ರವರೆಗಿನ ಕಡತಗಳಾಗಿವೆ.
ನೇತಾಜಿಯವರಿಗೆ ಸಂಬಂಧಿಸಿದ ಗುಪ್ತ ಕಡತಗಳನ್ನು ಬಹಿರಂಗಗೊಳಿಸುವ ಆಶ್ವಾಸನೆಯಂತೆ ಈ 50 ಕಡತಗಳನ್ನು ಬಿಡುಗಡೆ ಮಾಡಲಾಗಿದೆ. ಈ ಕಡತಗಳನ್ನು ನೋಡುವ ಸಾರ್ವಜನಿಕ ಬೇಡಿಕೆಯನ್ನು ಇದು ಪೂರೈಸಿದೆಯಲ್ಲದೆ, ಸ್ವಾತಂತ್ರ ಹೋರಾಟಗಾರನ ಕುರಿತು ಇನ್ನಷ್ಟು ಸಂಶೋಧನೆ ನಡೆಸಲು ವಿದ್ವಾಂಸರಿಗೆ ನೆರವಾಗಲಿದೆಯೆಂದು ಶರ್ಮಾ ಹೇಳಿದರು.