ಡಾ.ಬಿಆರ್ ಅಂಬೇಡ್ಕರ್ 125ನೆ ಜನ್ಮ ದಿನಾಚರಣೆ ಪ್ರಯುಕ್ತ ಆರ್'ಬಿಐನಿಂದ ಅಂಬೇಡ್ಕರ್ ಚಿತ್ರವಿರುವ 10 ರೂ. ಹೊಸ ನಾಣ್ಯ
Update: 2016-03-31 14:29 IST
ಮುಂಬೈ, ಮಾ. 31 : ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆ ಪ್ರಯುಕ್ತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 10 ರೂಪಾಯಿಯ ನೂತನ ನಾಣ್ಯವನ್ನು ಬಿಡುಗಡೆ ಮಾಡಲಿದೆ.
ಈ ಎರಡು ಲೋಹಗಳ ನಾಣ್ಯದ ಹೊರ ಆವರಣ ಅಲ್ಯುಮಿನಿಯಂ ಹಾಗು ಕಂಚಿನ ಮಿಶ್ರ ಲೋಹದಿಂದ ಕೂಡಿದ್ದು ಮಧ್ಯ ಭಾಗ ಕಪ್ರೋ ನಿಕಲ್ ನಿಂದ ಮಾಡಲ್ಪಟ್ಟಿದೆ. ನಾಣ್ಯದ ಒಂದು ಮುಖದಲ್ಲಿ ಅಶೋಕ ಸ್ಥಂಭದ ಸಿಂಹದ ಲಾಂಛನ ಹಾಗು ಸತ್ಯಮೇವ ಜಯತೆ ಪದಗಳು ಇರುತ್ತವೆ. ಇದರ ಕೆಳಗೆ ರೂಪಾಯಿ ಚಿಹ್ನೆ ಹಾಗು ಮುಖಬೆಲೆ 10 ಎಂದು ಅಂತಾರಾಷ್ಟ್ರೀಯ ಸಂಖ್ಯೆಯಲ್ಲಿ ಬರೆದಿರುತ್ತದೆ.
ನಾಣ್ಯದ ಇನ್ನೊಂದು ಮುಖದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಮಧ್ಯಭಾಗದಲ್ಲಿರುತ್ತದೆ. ಹಾಗು ದೇವನಾಗರಿ ಹಾಗು ಇಂಗ್ಲೀಷ್ ಲಿಪಿಗಳಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆ ಎಂದು ಬರೆದಿರುತ್ತದೆ. '2015' ಎಂದು ಅಂತಾರಾಷ್ಟ್ರೀಯ ಸಂಖ್ಯೆಯಲ್ಲಿ ಅಂಬೇಡ್ಕರ್ ಅವರ ಚಿತ್ರದ ಕೆಳಗೆ ಬರೆದಿರುತ್ತದೆ.