ಭಯೋತ್ಪಾದನೆಯ ಅಪಾಯಗಳನ್ನು ಗ್ರಹಿಸುವಲ್ಲಿ ವಿಶ್ವಸಂಸ್ಥೆ ವಿಫಲ: ಮೋದಿ

Update: 2016-03-31 16:01 GMT

  ಬ್ರಸೆಲ್ಸ್, ಮಾ.31: ಬುಧವಾರ ಇಲ್ಲಿ ವಿಶ್ವಸಂಸ್ಥೆಯ ವಿರುದ್ಧ ಕಟು ಟೀಕಾ ಪ್ರಹಾರವನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಇಂತಹ ಪ್ರಮುಖ ಜಾಗತಿಕ ಸಂಸ್ಥೆಯು ಭೀತಿವಾದದ ಅಪಾಯಗಳನ್ನು ಗ್ರಹಿಸುವಲ್ಲಿ ವಿಫಲವಾಗುತ್ತಿದೆ ಎಂದು ಹೇಳಿದರು. ‘ಹೊಸಯುಗದ ಸವಾಲನ್ನು ’ ಎದುರಿಸಲು ತುರ್ತಾಗಿ ಕಾರ್ಯಾಚರಿಸದಿದ್ದರೆ ಅದು ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ ಎಂಬ ಎಚ್ಚರಿಕೆಯನ್ನು ಅವರು ನೀಡಿದರು.

‘ಒಳ್ಳೆಯ ಭೀತಿವಾದ’ ಮತ್ತು ‘ಕೆಟ್ಟ ಭೀತಿವಾದ’ದ ಕರಿತು ಮಾತನಾಡುವವರನ್ನೂ ತರಾಟೆಗೆ ತೆಗೆದುಕೊಂಡ ಮೋದಿ, ಅವರು ತಿಳಿದೋ ಅಥವಾ ತಿಳಿಯದೆಯೋ ಯಾವುದೇ ದೇಶ ಅಥವಾ ಪ್ರದೇಶಕ್ಕೆ ಮಾತ್ರವಲ್ಲ, ಇಡೀ ಮಾನವತೆಗೇ ಬೆದರಿಕೆಯಾಗಿರುವ ಪಿಡುಗಿಗೆ ಪುಷ್ಟಿಯನ್ನು ನೀಡುತ್ತಿದ್ದಾರೆ ಎಂದರು.

ಭೀತಿವಾದವನ್ನು ಧರ್ಮದಿಂದ ಪ್ರತ್ಯೇಕಿಸಬೇಕು ಎಂದು ಇದೇ ವೇಳೆ ನುಡಿದ ಅವರು, ‘ಬಾಂಬ್‌ಗಳು, ಬಂದೂಕುಗಳು ಮತ್ತು ಪಿಸ್ತೂಲುಗಳನ್ನು’ ಮಾತ್ರ ಬಳಸಿ ಈ ಪಿಡುಗನ್ನು ನಿರ್ಮೂಲಗೊಳಿಸಲು ಸಾಧ್ಯವಿಲ್ಲ. ಯುವಕರನ್ನು ಮೂಲಭೂತವಾದಕ್ಕೆ ಬಲಿಯಾಗದಂತೆ ರಕ್ಷಿಸುವ ವಾತಾವರಣ ಸೃಷ್ಟಿಸುವ ಮೂಲಕ ಈ ಕಾರ್ಯ ಸಾಧ್ಯವಿದೆ ಎಂದು ಹೇಳಿದರು.

ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಕಳೆದ ವಾರ ಬ್ರಸೆಲ್ಸ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರಿಗಾಗಿ ಸಂತಾಪ ವ್ಯಕ್ತಪಡಿಸಿದರು.

ಕಳೆದ 40 ವರ್ಷಗಳಿಂದಲೂ ಭಾರತವು ಭಯೋತ್ಪಾದನೆಯ ಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿದೆ. ಆದರೆ ಭಯೋತ್ಪಾದನೆ ಎಷ್ಟು ‘ಮಾರಣಾಂತಿಕ’ ಮತ್ತು ‘ಕ್ರೂರ’ಎನ್ನುವುದನ್ನು ವಿಶ್ವವು ಇಂದು ಅರ್ಥ ಮಾಡಿಕೊಂಡಿದೆ. ಕಳೆದ ವರ್ಷ 90 ದೇಶಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆದು ಸಾವಿರಾರು ಜನರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ ಎಂದ ಮೋದಿ, ಭಯೋತ್ಪಾದನೆಯನ್ನು ಇನ್ನೂ ವ್ಯಾಖ್ಯಾನಿಸದ್ದಕ್ಕಾಗಿ ವಿಶ್ವಸಂಸ್ಥೆಯ ವಿರುದ್ಧ ಕಿಡಿ ಕಾರಿದರು.

ವಿಶ್ವಸಂಸ್ಥೆಗೆ ಭಯೋತ್ಪಾದನೆಯೆಂದರೇನು ಮತ್ತು ಅದನ್ನು ನಿಭಾಯಿಸುವುದು ಹೇಗೆ ಎನ್ನುವುದೇ ಗೊತ್ತಿಲ್ಲ ಎಂದರು.

ಭಯೋತ್ಪಾದನೆ, ಭಯೋತ್ಪಾದಕ, ಭಯೋತ್ಪಾದಕ ದೇಶ, ಭಯೋತ್ಪಾದಕರಿಗೆ ನೆರವಾಗುವವರು ಮತ್ತು ಬೆಂಬಲಿಸುವವರು ಹಾಗೂ ಭಯೋತ್ಪಾದನೆಯನ್ನು ಉತ್ತೇಜಿಸುವ ಅಂಶಗಳನ್ನು ವ್ಯಾಖ್ಯಾನಿಸುವಂತೆ ಭಾರತವು ವರ್ಷಗಳಿಂದಲೂ ವಿಶ್ವಸಂಸ್ಥೆಯನ್ನು ಕೋರುತ್ತಲೇ ಇದೆ. ಒಮ್ಮೆ ಇವೆಲ್ಲ ಸ್ಪಷ್ಟವಾದರೆ ಜನರು ಭಯೋತ್ಪಾದನೆಯೊಂದಿಗೆ ಗುರುತಿಸಿಕೊಳ್ಳಲು ಹಿಂಜರಿಯುತ್ತಾರೆ ಮತ್ತು ಅದರಿಂದ ದೂರವಾಗಲು ಪ್ರಯತ್ನಿಸುತ್ತಾರೆ ಎಂದರು.

 ವಿಶ್ವಸಂಸ್ಥೆಯು ಇದನ್ನು ಯಾವಾಗ ಮತ್ತು ಹೇಗೆ ಮಾಡುತ್ತದೆ ಎನ್ನುವುದು ತನಗೆ ಗೊತ್ತಿಲ್ಲ. ಆದರೆ ಈಗಿನ ಪರಿಸ್ಥಿತಿಯನ್ನು ಪರಿಗಣಿಸಿದರೆ ಭಯೋತ್ಪಾದನೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳದಿದ್ದರೆ ವಿಶ್ವಸಂಸ್ಥೆಯು ಅಪ್ರಸ್ತುತಗೊಳ್ಳುವ ಕಾಲವು ದೂರವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News